ಹಾವುಗಳು ಜೀವಿತಾವಧಿ ಎಷ್ಟು ವರ್ಷ? ಯಾವುದಕ್ಕೆ ದೀರ್ಘಕಾಲದ ಆಯುಷ್ಯ; ಇಲ್ಲಿದೆ ಅಚ್ಚರಿ ಮಾಹಿತಿ | Snakes Lifespan

ವಿಜಯವಾಣಿ - 2025-07-28T174734.699
Published on

Snakes Lifespan: ಹಾವುಗಳ ಸಂಚಾರ ಅಥವಾ ಕಣ್ಣಿಗೆ ಬಿದ್ದರೆ ಸಾಕು, ಒಂದು ಮೈಲಿ ದೂರ ಓಡುವವರ ಸಂಖ್ಯೆಯೇ ಹೆಚ್ಚು. ಉರಗಗಳಲ್ಲಿ ವಿಷಪೂರಿತ ಹಾಗೂ ವಿಷರಹಿತ ಪ್ರಭೇದಗಳಿವೆ. ಇದರಲ್ಲಿ ಯಾವುದನ್ನೂ ಕಂಡರು ಜನರು ಭಯಭೀತಿಗೆ ಒಳಗಾಗುತ್ತಾರೆ. ಕೆಲವರು ಹಾವನ್ನು ನೋಡ ನೋಡುತ್ತಿದ್ದಂತೆ ನಿಂತಲ್ಲೇ ಮೂರ್ಛೆ ಹೋಗಿರುತ್ತಾರೆ. ಇದಕ್ಕೆ ಹಲವಾರು ನಿದರ್ಶನಗಳಿವೆ. ಅಸಲಿಗೆ ಆಯಾ ಹಾವುಗಳ ವಿಷ ಎಷ್ಟು ಅಪಾಯ ಎಂಬುದರ ಮಾಹಿತಿ ಹಲವರಿಗಿದೆ. ಆದರೆ, ಈ ಹಾವುಗಳ ಜೀವಿತಾವಧಿ ಎಷ್ಟು ಎಂಬ ಸಂಗತಿ ಇಂದಿಗೂ ಬಹುತೇಕರಿಗೆ ಗೊತ್ತಿಲ್ಲ.

ಉದ್ದದ ಹಾವುಗಳು ಎಷ್ಟು ವರ್ಷಗಳ ಕಾಲ ಜೀವಿಸಬಹುದು? ಇದಕ್ಕೆ ವಯಸ್ಸು ದಾಖಲು ಮಾಡಲಾಗುತ್ತದೆಯೇ? ಮನುಷ್ಯರಂತೆಯೇ ಹಾವುಗಳಿಗೂ ಕೂಡ ಜೀವಿತಾವಧಿ ನಿಗದಿಪಡಿಸಲಾಗಿದ್ಯಾ? ಎಂಬ ಹತ್ತು ಹಲವು ಪ್ರಶ್ನೆಗಳು ಜನರಲ್ಲಿ ಕಾಡುತ್ತಿವೆ. ಮಧ್ಯಪ್ರದೇಶದ ಉರಗ ತಜ್ಞರೊಬ್ಬರು ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದಷ್ಟು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಯಾವ ಪ್ರಭೇದದ ಹಾವುಗಳು ಹೆಚ್ಚು ಕಾಲ ಬದುಕುತ್ತವೆ ಮತ್ತು ಅವುಗಳ ವಯಸ್ಸನ್ನು ಹೇಗೆ ಅಂದಾಜು ಮಾಡುವುದು ಎಂಬುದು ಸೇರಿದೆ.

ಖಾರ್ಗೋನ್ ಜಿಲ್ಲೆಯ ಮಂಡಲೇಶ್ವರ ನಿವಾಸಿಯಾದ ಮಹಾದೇವ್, ಕಳೆದ 9 ವರ್ಷಗಳಿಂದ ಉರಗಗಳನ್ನು ರಕ್ಷಿಸಿ, ಅವುಗಳ ಅಧ್ಯಯನದಲ್ಲಿ ತೊಡಗಿದ್ದಾರೆ. "ಭಾರತವು 270ಕ್ಕೂ ಹೆಚ್ಚು ಬಗೆಯ ಹಾವುಗಳಿಗೆ ನೆಲೆಯಾಗಿದೆ. ಇವುಗಳಲ್ಲಿ ಕೆಲವು, ಉದಾಹರಣೆಗೆ ಹಸಿರು ಹಾವುಗಳು, ಸಾಮಾನ್ಯವಾಗಿ ವಸತಿ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಬಹುತೇಕ ದಟ್ಟ ಕಾಡು ಪ್ರದೇಶಗಳಲ್ಲಿ ಹೆಚ್ಚು ವಾಸಿಸುತ್ತವೆ" ಎಂದಿದ್ದಾರೆ.

ಮಹಾದೇವ್ ಹೇಳಿಕೆ ಪ್ರಕಾರ, "ವಿವಿಧ ಜಾತಿಯ ಹಾವುಗಳು ವಿಭಿನ್ನ ಜೀವಿತಾವಧಿಯನ್ನು ಹೊಂದಿರುತ್ತವೆ. ಅವುಗಳು ಪರಿಸರದ ವಾತಾವರಣಕ್ಕೆ ಹೆಚ್ಚು ಹೊಂದಿಕೊಂಡಿರುತ್ತವೆ. ಖಾರ್ಗೋನ್ ಸೇರಿದಂತೆ ಮಧ್ಯಪ್ರದೇಶದಲ್ಲಿ ಮಾತ್ರ, ಸುಮಾರು 40 ಪ್ರಭೇದದ ಹಾವುಗಳು ಕಂಡುಬರುತ್ತವೆ. ಆದಾಗ್ಯೂ, ಅವುಗಳಲ್ಲಿ ಕೆಲವು ಮಾತ್ರ ಆಗಾಗ್ಗೆ ಜನರ ಕಣ್ಣಿಗೆ ಬೀಳುತ್ತವೆ ಅಷ್ಟೇ. ಉಳಿದೆಲ್ಲವೂ ಬಹಳ ಅಪರೂಪ" ಎನ್ನುತ್ತಾರೆ.

"ಹಾವಿನ ಸರಾಸರಿ ಜೀವಿತಾವಧಿ ಸಾಮಾನ್ಯವಾಗಿ 5ರಿಂದ 15 ವರ್ಷ. ಆದಾಗ್ಯೂ, ಹೆಬ್ಬಾವುಗಳು ಮಾತ್ರ ಸುಮಾರು 40 ವರ್ಷಗಳವರೆಗೆ ಬದುಕಬಲ್ಲವು. ಮಾನವ ಚಟುವಟಿಕೆ ಹೆಚ್ಚಿರುವ ಹುಲ್ಲುಗಾವಲು ಅಥವಾ ವಸತಿ ಪ್ರದೇಶಗಳಲ್ಲಿ ವಾಸಿಸುವ ಹಾವುಗಳು ಸಾಮಾನ್ಯವಾಗಿ 8ರಿಂದ 10 ವರ್ಷಗಳವರೆಗೆ ಜೀವಿಸುತ್ತವೆ. ಇವುಗಳ ಜೀವಿತಾವಧಿ ಕಡಿಮೆಯೇ" ಎಂದು ಮಹಾದೇವ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net