IPL​ 2025ರ ಆವೃತ್ತಿಯಲ್ಲಿ ಬಿಸಿಸಿಐ ಗಳಿಸಿದ ಲಾಭವೆಷ್ಟು ಗೊತ್ತೇ? ಇಲ್ಲಿದೆ ನೋಡಿ ವಿವರ!

ವಿಜಯವಾಣಿ (45)
Published on

IPL 2025: ಈ ವರ್ಷದ 18ನೇ ಆವೃತ್ತಿಯ ಐಪಿಎಲ್ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಗೆಲುವಿನ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸತತ ಸೋಲುಗಳನ್ನು ಉಂಡಿದ್ದ ಆರ್​ಸಿಬಿ, ತಮ್ಮ ಚೊಚ್ಚಲ ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ಲೀಗ್​ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆಯಿತು.​ ಉತ್ತಮ ರೀತಿಯಲ್ಲಿ ಅಂತ್ಯಗೊಂಡ ಐಪಿಎಲ್​ ಬಿಸಿಸಿಐಗೆ ಭರ್ಜರಿ ಆದಾಯವನ್ನೇ ತಂದುಕೊಟ್ಟಿದೆ.

ಈ ವರ್ಷದ ಐಪಿಎಲ್​ ಆವೃತ್ತಿ ಆರಂಭದಿಂದ ಅಂತ್ಯದವರೆಗೆ ಬಿಸಿಸಿಐ ವಿವಿಧ ರೀತಿಯಲ್ಲಿ ಆದಾಯವನ್ನು ಗಳಿಸಿದೆ. ಟೆಲಿವಿಷನ್​ ಮತ್ತು ಡಿಜಿಟಲ್​ ಹಕ್ಕುಗಳು, ಪ್ರಾಯೋಜಕತ್ವಗಳು, ಫ್ರಾಂಚೈಸಿ ಶುಲ್ಕಗಳು, ಟಿಕೆಟ್ ಮಾರಾಟ ಸೇರಿದಂತೆ ಇತರೆ ಮೂಲಗಳಿಂದ ಭರ್ಜರಿ ಆದಾಯ ಹರಿದುಬಂದಿದೆ. ಇವುಗಳಲ್ಲಿ ಅತ್ಯಂತ ಲಾಭದಾಯಕ ಎಂದರೆ ಅದು ಪ್ರಸಾರ ಹಕ್ಕುಗಳು ಎಂಬುದು ಇಲ್ಲಿ ಗಮನಾರ್ಹ ಸಂಗತಿ.

ಟಿವಿ ಹಕ್ಕುಗಳು ಸ್ಟಾರ್ ಸ್ಪೋರ್ಟ್ಸ್ ಬಳಿಯಿದ್ದರೆ, ಡಿಜಿಟಲ್ ಹಕ್ಕುಗಳು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ವಯಾಕಾಮ್ -18 ಪಾಲಾಗಿದೆ. ಐಪಿಎಲ್ 2025ರ ಒಟ್ಟು ಪ್ರಸಾರ ಹಕ್ಕು ಶುಲ್ಕ 9678 ಕೋಟಿ ರೂ., ಇದು ಪ್ರತಿ ಪಂದ್ಯಕ್ಕೆ ಸರಿಸುಮಾರು 130.7 ಕೋಟಿ ರೂ. ಎಂದು ಹೇಳಲಾಗಿದೆ. ಅದಾಗ್ಯೂ, ಶೀರ್ಷಿಕೆ ಪ್ರಾಯೋಜಕತ್ವ ಶುಲ್ಕವನ್ನು ಪರಿಗಣಿಸಿದರೆ, 2024ರಲ್ಲಿ, ಟಾಟಾ ಗ್ರೂಪ್ 2024ರಿಂದ 2028 ರವರೆಗೆ ಇನ್ನೂ ಐದು ವರ್ಷಗಳ ಕಾಲ 2,500 ಕೋಟಿ ರೂ.ಗೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ.

ಅಂದರೆ, ಆ ಒಪ್ಪಂದದ ಭಾಗವಾಗಿ, IPL 2025ರ ಆವೃತ್ತಿಯಲ್ಲಿ 500 ಕೋಟಿ ರೂ. ಆದಾಯ ಬರಲಿದೆ. ಇದರೊಂದಿಗೆ, ಬಿಸಿಸಿಐ ಅಸೋಸಿಯೇಟ್ ಪಾರ್ಟ್‌ನರ್ಸ್ ಆದ ಮೈ11 ಸರ್ಕಲ್, ಏಂಜೆಲ್ ಒನ್, ರುಪೇ, ಸ್ಟ್ರಾಟೆಜಿಕ್ ಟೈಮ್ ಔಟ್ ಪಾರ್ಟ್‌ನರ್ಸ್ -ಸಿಇಎಟಿ, ಅಧಿಕೃತ ಅಂಪೈರ್ ಪಾರ್ಟ್‌ನರ್ಸ್ - ವಂಡರ್ ಸಿಮೆಂಟ್, ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಪಾರ್ಟ್‌ನರ್ಸ್ - ಅರಾಮ್ಕೊ ಮುಂತಾದ ಇತರ ಪ್ರಾಯೋಜಕರಿಂದ ಉತ್ತಮ ಆದಾಯವೇ ಬಿಸಿಸಿಐ ಖಜಾನೆ ಸೇರಿದೆ.

ಬಿಸಿಸಿಐ ಪ್ರತಿ ತಂಡದಿಂದ ಕೇಂದ್ರ, ಪ್ರಾಯೋಜಕತ್ವ ಮತ್ತು ಟಿಕೆಟ್ ಆದಾಯದ 20 ಪ್ರತಿಶತ ಮತ್ತು ಪರವಾನಗಿ ಆದಾಯದ 12.5 ಪ್ರತಿಶತವನ್ನು ಪಡೆಯುತ್ತದೆ. ಆದಾಗ್ಯೂ, 2024ರ ಹಣಕಾಸು ವರ್ಷದಲ್ಲಿ ಬಿಸಿಸಿಐ ಆದಾಯದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಕ್ರಿಕೆಟ್​ ವರದಿ ಉಲ್ಲೇಖಿಸಿದೆ. 2024ರಲ್ಲಿ, ಬಿಸಿಸಿಐ 20,686 ಕೋಟಿ ರೂ. ಆದಾಯ ಗಳಿಸಿದರೆ, 2023ರ ಹಣಕಾಸು ವರ್ಷದಲ್ಲಿ 16,493 ಕೋಟಿ ರೂ. ಆದಾಯ ದಾಖಲಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net