

ಚೆನ್ನೈ: ಹಿಂದೂ ಧರ್ಮ ಮತ್ತು ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ವಿವಾದದ ನಂತರ ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ(DMK Party Leader) ಕೆ.ಪೊನ್ಮುಡಿ ಅವರನ್ನು ಪಕ್ಷದ ಪ್ರಮುಖ ಹುದ್ದೆಯಿಂದ ತೆಗೆದುಹಾಕಲಾಗಿದೆ.
ಸ್ವತಃ ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪೊನ್ಮುಡಿ ಅವರನ್ನು ಪಕ್ಷದ ಉಪಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಘೋಷಿಸಿದ್ದಾರೆ. ಆದರೆ ಅವರ ವಿರುದ್ಧದ ಕ್ರಮಕ್ಕೆ ಸ್ಟಾಲಿನ್ ಯಾವುದೇ ಕಾರಣ ನೀಡಿಲ್ಲ ಎಂದು ಹೇಳಲಾಗಿದೆ. ಸಚಿವರ ಈ ಅಹಿತಕರ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಪೊನ್ಮುಡಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿತು.
ಡಿಎಂಕೆ ಸಚಿವ ಪೊನ್ಮುಡಿ ಹಿಂದೂ ಧಾರ್ಮಿಕ ಚಿಹ್ನೆಗಳನ್ನು ಲೈಂಗಿಕ ಭಂಗಿಗಳೊಂದಿಗೆ ಹೋಲಿಕೆ ಮಾಡಿದ್ದರು. ಶೈವ ಮತ್ತು ವೈಷ್ಣವ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಮಾತ್ರವಲ್ಲದೇ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತೋರಿಸುವ ಸಾರ್ವಜನಿಕ ಕಾರ್ಯಕ್ರಮವೊಂದರ ವಿಡಿಯೋ ವೈರಲ್ ಆಗಿತ್ತು. ಆದರೆ ಈ ಕುರಿತು ಪೊನ್ಮುಡಿ ಅವರಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಬಿಜೆಪಿಯ ತಮಿಳುನಾಡು ಘಟಕದ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ನಲ್ಲಿ, ಸಚಿವ ಪೊನ್ಮುಡಿ ಇನ್ನೂ ತಮ್ಮ ಹುದ್ದೆಯಲ್ಲಿಯೇ ಇರುವುದು ನಾಚಿಕೆಗೇಡಿನ ಸಂಗತಿ. ಸಿಎಂ ಸ್ಟಾಲಿನ್ ನೀವು ಪೊನ್ಮುಡಿ ಬಂಧನಕ್ಕೆ ಆದೇಶಿಸುತ್ತೀರಾ ಎಂದು ಪ್ರಶ್ನಿಸಿದ್ದರು.
ಪೊನ್ಮುಡಿ ಅವರ ಹೇಳಿಕೆಗೆ ವಿಪಕ್ಷಗಳು ಮಾತ್ರವಲ್ಲದೇ ಡಿಎಂಕೆ ಪಕ್ಷದ ಮಹಿಳಾ ನಾಯಕರೇ ತೀವ್ರ ಕಿಡಿಕಾರಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಡಿಎಂಕೆ ನಾಯಕಿ ಕನ್ನಿಮೋಳಿ, 'ಸಚಿವ ಪೊನ್ಮುಡಿ ಅವರ ಇತ್ತೀಚಿನ ಹೇಳಿಕೆ ಸ್ವೀಕಾರಾರ್ಹವಲ್ಲ. ಪೊನ್ಮುಡಿ ಯಾವುದೇ ಕಾರಣಕ್ಕಾಗಿ ಮಾತನಾಡಿದ್ದರೂ, ಅಂತಹ ಅಸಭ್ಯ ಪದಗಳು ಖಂಡನೀಯ ಎಂದು ಪ್ರತಿಕ್ರಿಯಿಸಿದರು.(ಏಜೆನ್ಸೀಸ್)