More

    ಬೆಂಗಳೂರಿಗೆ ಆಗಮಿಸಿದ ಸಿದ್ದು, ಡಿಕೆಶಿ: ಶಾಸಕಾಂಗ ಪಕ್ಷದ ಸಭೆ ಬಳಿಕ ರಾಜಭವನಕ್ಕೆ ತೆರಳಲಿರುವ ಸಿದ್ದು

    ಬೆಂಗಳೂರು: ಮುಖ್ಯಮಂತ್ರಿ ಪಟ್ಟಕ್ಕಾಗಿ ಕಳೆದ ಐದು ದಿನಗಳಿಂದ ದೆಹಲಿಯಲ್ಲಿ ನಡೆದ ಹಗ್ಗಜಗ್ಗಾಟಕ್ಕೆ ತೆರೆಬಿದ್ದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ಅವರು ಇಂದು ರಾಜಧಾನಿಗೆ ಬಂದಿಳಿದಿದ್ದಾರೆ. ಕಾಂಗ್ರೆಸ್​ ಹೈಕಮಾಂಡ್​ ತೀರ್ಮಾನದಂತೆ ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿಕೆಶಿ ಅವರು ಆಯ್ಕೆಯಾಗಿದ್ದಾರೆ.

    ಸಂಧಾನ ಯಶಸ್ವಿಯಾದ ಬೆನ್ನಲ್ಲೇ ಸಿದ್ದರಾಮಯ್ಯ ಮತ್ತು ಡಿಕೆಶಿ ಸಂಜೆ 6.30ರ ಸುಮಾರಿಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಉಭಯ ನಾಯಕರು ಬಂದಿಳಿದರು. ಈ ವೇಳೆ ಎಂಬಿ ಪಾಟೀಲ್ ಸೇರಿದಂತೆ ಕೆಲ ಶಾಸಕರು ಆಗಮಿಸಿ ನಾಯಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕರ್ನಾಟಕದ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೂಡ ಸಿದ್ದು ಮತ್ತು ಡಿಕೆಶಿ ಜತೆ ಆಗಮಿಸಿದ್ದಾರೆ.

    ಇದನ್ನೂ ಓದಿ: ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲಿರುವ VVIPಗಳು ಯಾರು? ಆಹ್ವಾನಿತರ ಪಟ್ಟಿ ಇಂತಿದೆ…

    ಶಾಸಕಾಂಗ ಪಕ್ಷದ ಸಭೆ

    ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಎಲ್ಲ ಕಾಂಗ್ರೆಸ್ ಶಾಸಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ, ಪರಿಷತ್ ಸದಸ್ಯರು ಮತ್ತು ಸಂಸದರು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಸಭೆ ಬಳಿಕ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ರಾಜಭವನಕ್ಕೆ ತೆರಳಲಿದ್ದಾರೆ. ನಂತರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಬಳಿಕ ರಾಜ್ಯಪಾಲರಿಂದ ಸರ್ಕಾರದ ರಚನೆಗೆ ಹಸಿರು ನಿಶಾನೆ ಸಿಗಲಿದೆ.

    ಮೇ 20ರ ಶನಿವಾರದಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮತ್ತು ಡಿ.ಕೆ. ಶಿವಕುಮಾರ್​ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಗರದ ಕಂಠೀರವ ಸ್ಟೇಡಿಯಂಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

    ಕಳೆದ ಐದು ದಿನಗಳಿಂದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ಅವರು ಸಿಎಂ ಸ್ಥಾನಕ್ಕಾಗಿ ದೆಹಲಿಯಲ್ಲಿ ಶತಪ್ರಯತ್ನ ನಡೆಸಿದರು. ಅಂತಿಮವಾಗಿ ಇದರಲ್ಲಿ ಸಿದ್ದರಾಮಯ್ಯಗೆ ಗೆಲುವಾಗಿದೆ. ಹಾಗಂತ ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುವುದಿಲ್ಲ. ಬದಲಿಗೆ ಅಧಿಕಾರ ಹಂಚಿಕೆ ಸೂತ್ರದ ಅಡಿಯಲ್ಲಿ ಸಿದ್ದು ಮತ್ತು ಡಿಕೆಶಿ ನಡುವೆ ಸಿಎಂ ಸ್ಥಾನ ಹಂಚಿಕೆಯಾಗಲಿದೆ. ಈ ಒಂದು ಭರವಸೆ ಮೇಲೆ ಡಿಕೆಶಿ ಸಿಎಂ ಸ್ಥಾನದ ರೇಸ್​ನಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ. ಸ್ವತಃ ಸೋನಿಯಾ ಗಾಂಧಿಯವರೇ ಈ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್​ನ ಉನ್ನತ ಮೂಲಗಳು ತಿಳಿಸಿವೆ.

    ಡಿಕೆಶಿ ಮನವೊಲಿಕೆ ಹಿಂದಿದೆ ಸೋನಿಯಾ ಗಾಂಧಿ ಪಾತ್ರ: ಆ ಒಂದು ಕರೆಗೆ ಕರಗಿದ ಕನಕಪುರದ ಬಂಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts