ಪಾವೂರು ಉಳಿಯ ಕುದ್ರು ಪರಿಸರದಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಕಠಿಣ ಕ್ರಮ; ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ

Screenshot_20240927_070030_Google
Published on

ಮಂಗಳೂರು: ಪಾವೂರು ಉಳಿಯ ಕುದ್ರು ಪರಿಸರದಲ್ಲಿ ವಾಸಿಸುವ ನಾಗರಿಕರು, ಪರಿಸರ ಹಾಗೂ ಇತರ ಸಂಪನ್ಮೂಲಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಅಕ್ರಮ ಗಣಿಗಾರಿಕೆ ತಡೆಗಟ್ಟಲುಇತರ ಸಂಬಂಧಿಸಿದ ಎಲ್ಲ ಇಲಾಖೆಗಳು ಕಟ್ಟು ನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.

ಉಳ್ಳಾಲದ ಪಾವೂರು ಉಳಿಯ ಕುದ್ರು ಬಳಿ ಅಕ್ರಮ ಮರಳುಗಾರಿಕೆ ನಡೆಯುವ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ರಚಿಸಿದ ಏಳು ಜನ ಸದಸ್ಯರ ಸಮಿತಿ ವರದಿ ಸಲ್ಲಿಸಿದ ಬಳಿಕ ಈ ಆದೇಶ ಹೊರಬಿದ್ದಿದೆ.

ಮತ್ತೆ ಅನಧಿಕೃತ ಗಣಿಗಾರಿಕೆ ನಡೆಯುವುದು ಕಂಡು ಬಂದರೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

ಮರಳು ಗಣಿಗಾರಿಕೆ ಮಾಡುವ ದೋಣಿಗಳನ್ನು ಜಫ್ತಿ ಮಾಡಿ ಸರ್ಕಾರದ ವಶಕ್ಕೆ ಪಡೆಯಬೇಕು, ಮರಳು ಶೇಖರಣೆ ಮಾಡುವ ಸಮೀಪದ ಜಟ್ಟಿಗಳಲ್ಲಿ(ಅಡ್ಯಾರು, ವಳಚ್ಚಿಲ್‌, ಗಾಡಿಬೈಲ್‌ ಗ್ರಾಮದ ನದಿ ತೀರದಲ್ಲಿರುವ ಮರಳುಜಟ್ಟಿ) ಮರಳು ದಾಸ್ತಾನು ಮಾಡದಂತೆ ತಡೆಗಟ್ಟುವುದು, ಅನಧಿಕೃತ ಮರಳು ದಾಸ್ತಾನು ಕಂಡುಬಂದರೆ ಸಂಬಂಧಿತ ಭೂಮಾಲೀಕರ ವಿರುದ್ಧ ತಕ್ಷಣ ಮೊಕದ್ದಮೆ ದಾಖಲಿಸಬೇಕು ಎಂದು ಸಮಿತಿಯಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿಯವರು ಶಿಫಾರಸು ಮಾಡಿದ್ದಾರೆ.

ಮಂಗಳೂರು ನಗರ ಉತ್ತರ ಎಸಿಪಿಯವರು ತಮ್ಮ ಶಿಫಾರಸು ನೀಡಿದ್ದು, ಅಕ್ರಮ ಮರಳುಗಾರಿಕೆ ನಡೆಸುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು, ಗಣಿ ಇಲಾಖೆಯವರೊಂದಿಗೆ ಸಮನ್ವಯತೆಯಿಂದ ರಾತ್ರಿ ಗಸ್ತು ತಿರುಗಲು ಪೊಲೀಸ್‌ ಸಿಬಂದಿ ನೇಮಕ ಮಾಡಬೇಕು ಎಂದು ವರದಿ ಕೊಟ್ಟಿದ್ದಾರೆ.

ಅದೇ ರೀತಿ ಮಂಗಳೂರು ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ತಮ್ಮ ವರದಿಯಲ್ಲಿ ತಾಲೂಕು ಟಾಸ್ಕ್‌ಫೋರ್ಸ್‌ ಸಮಿತಿಯಿಂದ ಚಾಲಿತ ದಳ ನೇಮಿಸಿಕೊಂಡು ಬಾಧಿತ ಪ್ರದೇಶಕ್ಕೆ ರಾತ್ರಿ ಗಸ್ತು ತಿರುಗಲು ಹಾಗೂ ಮರಳುಗಾರಿಕೆ ಅಕ್ರಮ ನಿಯಂತ್ರಿಸಲು ಕ್ರಮ ಜರುಗಿಸಬೇಕು.

ಅನಧಿಕೃತ ಮರಳು ದಾಸ್ತಾನು ಮಾಡುವ ಜಮೀನು ಮಾಲೀಕರ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದ್ದಾರೆ.

ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ ತಡೆ ವಿರೋಧಿಸಿ ಸ್ಥಳೀಯ ಗ್ರಾಮಸ್ಥರು ಸೆಪ್ಟೆಂಬರ್ 27 ರಂದು ಮಂಗಳೂರು ನಗರದಲ್ಲಿ ಪಾದಯಾತ್ರೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶ ಮಹತ್ವ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net