ಇದು ಡಿವೋರ್ಸ್​ ಫೋಟೋಶೂಟ್​! ಮದ್ವೆ ಬಟ್ಟೆ ಸುಟ್ಟು, ಫೋಟೋ ಹರಿದು ವಿಚ್ಛೇದನ ಸಂಭ್ರಮಿಸಿದ ಮಹಿಳೆ

Divorce Photoshoot
Published on

ನವದೆಹಲಿ: ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡುವುದು, ಮದುವೆ ಸಮಯದಲ್ಲಿ ಮತ್ತು ಗರ್ಭಿಣಿಯಾದಾಗ ಫೋಟೋಶೂಟ್​ ಮಾಡಿಸುವುದು ಸಾಮಾನ್ಯ. ಇಲ್ಲಿಯವರೆಗೆ ನಾವು-ನೀವೆಲ್ಲ ಇದನ್ನೆ ನೋಡಿರುವುದು. ಆದರೆ, ಇದೀಗ ಇನ್ನೊಂದು ಟ್ರೆಂಡ್​ ಶುರುವಾಗಿದೆ. ಅದರ ಬಗ್ಗೆ ಕೇಳಿದರೆ ಸ್ವಲ್ಪ ವಿಚಿತ್ರ ಎನಿಸಿದೇ ಇರದು.

ಹೌದು, ಇದೀಗ ಶುರುವಾಗಿರುವ ಟ್ರೆಂಡ್​​ ಯಾವುದು ಅಂದರೆ, ಡಿವೋರ್ಸ್​ ಫೋಟೋಶೂಟ್​ ಟ್ರೆಂಡ್​. ಮಹಿಳೆಯೊಬ್ಬಳು ತನ್ನ ಡಿವೋರ್ಸ್​ ಅನ್ನು ಫೋಟೋಶೂಟ್​ ಮೂಲಕ ಸಂಭ್ರಮಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬೆಲೆಕಟ್ಟಲಾಗದ ಫೋಟೋಗಳು

ಪುಬಿಟಿ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್​ ಮಾಡಲಾಗಿದೆ. ಈ ಮಹಿಳೆಯ ವಿಚ್ಛೇದನ ಫೋಟೋಶೂಟ್‌ನಿಂದ ಸೆರೆಹಿಡಿಯಲಾದ ಈ ಬೆಲೆಕಟ್ಟಲಾಗದ ಫೋಟೋಗಳು ಎಂದು ಅಡಿಬರಹ ನೀಡಿದ್ದಾರೆ. ಸುಮಾರು 5 ಲಕ್ಷ ಕ್ಕೂ ಅಧಿಕ ಲೈಕ್​ ಪಡೆದುಕೊಂಡಿವೆ.

ಸಂಭ್ರಮಾಚರಣೆ ಫೋಟೋಶೂಟ್ ಚಿತ್ರಗಳಲ್ಲಿ ಲಾರೆನ್ ಬ್ರೂಕ್ ಎಂಬ ಮಹಿಳೆ ಬೆರಗುಗೊಳಿಸುವ ಕೆಂಪು ಉಡುಪಿನಲ್ಲಿ ಪೋಸ್ ನೀಡಿದ್ದು, 'ವಿಚ್ಛೇದಿತಳು' ಎಂಬ ಫಲಕವನ್ನು ಹಿಡಿದಿದ್ದಾರೆ. ಫೋಟೋಶೂಟ್ 8 ಚಿತ್ರಗಳನ್ನು ಹೊಂದಿದೆ. ಬ್ರೂಕ್ ತನ್ನ ಮದುವೆಯ ವೇಲ್​ ಅನ್ನು ಬೆಂಕಿಗೆ ಹಾಕುವುದು, ಮದುವೆಯ ಫೋಟೋ ಫ್ರೇಮ್ ಅನ್ನು ತುಳಿಯುತ್ತಿರುವುದು, ತನ್ನ ಮಾಜಿ ಗಂಡನ ಚಿತ್ರವನ್ನು ಹರಿದು ಹಾಕುವುದು ಹಾಗೂ ಮದುವೆಯ ಡ್ರೆಸ್ ಮೇಲೆ ನಿಂತು ಶಾಂಪೇನ್ ಬಾಟಲಿಯ ತೆರೆಯುತ್ತಿರುವ ಫೋಟೋಗಳಿವೆ.

ಈ ಹೊಸ ಟ್ರೆಂಡ್​ ಅನ್ನು ಕೆಲ ನೆಟ್ಟಿಗರು ಇಷ್ಟಪಟ್ಟಿದ್ದು, ಕಾಮೆಂಟ್​ಗಳ ಮಹಾಪೂರವನ್ನೇ ಹರಿಸಿದ್ದಾರೆ. ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net