₹ 735 ಕೋಟಿ ಯೋಜನೆಗೆ ಚಾಲನೆ

dc office
Published on

ಬೀದರ್: 735 ಕೋಟಿ ರೂ. ವೆಚ್ಚದ ಔರಾದ್-ಬೀದರ್ ಹಾಗೂ ಬೀದರ್-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ ಮತ್ತು ನೌಬಾದ್ ಹತ್ತಿರದ ಮೇಲ್ಸೇತುವೆ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಲಾಯಿತು.

ವರ್ಚುವಲ್ ಮೂಲಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನವದೆಹಲಿಯಿಂದ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬೀದರ್ ಸೇರಿ 10,904 ಕೋಟಿ ಅನುದಾನದಲ್ಲಿ ರಾಜ್ಯದ 33 ರಾಷ್ಟ್ರೀಯ ಹೆದ್ದಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ರಾಜ್ಯದ ಹೆದ್ದಾರಿ ಕಾಮಗಾರಿಗಳ ಬಗ್ಗೆ ಸಚಿವ ನಿತಿನ್ ಗಡ್ಕರಿ ಮಾತನಾಡುವ ವೇಳೆ ಬೀದರ್ ಕಾಮಗಾರಿಗಳ ಕುರಿತು ಉಲ್ಲೇಖ ಮಾಡಲಿಲ್ಲ.

ಬೆಂಗಳೂರಿನಿಂದ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಪ್ರಹ್ಲಾದ್ ಜೋಶಿ, ಬಿ.ಕೆ. ಸಿಂಗ್, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಬೀದರ್ ನಿಂದ ಸಂಸದ ಭಗವಂತ ಖೂಬಾ ಸೇರಿ ಜನಪ್ರತಿನಿಧಿಗಳು, ಆಯಾ ಕ್ಷೇತ್ರದ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಸಹ ವರ್ಚುವಲ್ ನಲ್ಲಿ ಪಾಲ್ಗೊಂಡಿದ್ದರು.

ಬೀದರ್-ಔರಾದ್ ಹಾಗೂ ಬೀದರ್-ಹುಮನಾಬಾದ್ ಹೆದ್ದಾರಿ ಕಾಮಗಾರಿ ಮಂಜೂರಾಗಿ ಹಲವು ತಿಂಗಳಾದರೂ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿತ್ತು. ಔರಾದ್ ಹೆದ್ದಾರಿಗೆ ಟೆಂಡರ್ ತಾಂತ್ರಿಕ ಕಾರಣವಾದರೆ, ಹುಮನಾಬಾದ್ ಹೆದ್ದಾರಿಗೆ ಗುತ್ತಿಗೆದಾರ ಹಿಂದೆ ಸರಿದಿದ್ದರಿಂದ ವಿಳಂಬವಾಗಿತ್ತು. ಇದೀಗ ಎಲ್ಲ ತೊಡಕುಗಳನ್ನು ನಿವಾರಿಸಿ ಶಂಕುಸ್ಥಾಪನೆ ಮಾಡಲಾಗಿದೆ.

47.78 ಕಿಮೀ ಬೀದರ್-ಔರಾದ್ ಹೆದ್ದಾರಿ 335 ಕೋಟಿ ರೂ., 47.03 ಕಿಮೀ ಬೀದರ್-ಹುಮನಾಬಾದ್ ಹೆದ್ದಾರಿ 325 ಕೋಟಿ ರೂ. ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರೊಂದಿಗೆ ನೌಬಾದ್ ಹತ್ತಿರದ ರೈಲ್ವೆ ಗೇಟ್ ಹತ್ತಿರ 75 ಕೋಟಿ ರೂ.ಗಳಲ್ಲಿ ಮೇಲ್ಸೇತುವೆ ಮಾಡಲಾಗುತ್ತಿದೆ. ಮೂರು ಕಾಮಗಾರಿಗಳನ್ನು ಎರಡು ವರ್ಷದೊಳಗೆ ಮುಗಿಸಲು ಕಾಲಮಿತಿ ಹಾಕಿಕೊಳ್ಳಲಾಗಿದೆ.

ಡಿಸಿ ಕಚೇರಿಯಲ್ಲಿ ವ್ಯವಸ್ಥೆ: ವರ್ಚುವಲ್ ಕಾರ್ಯಕ್ರಮವನ್ನು ಡಿಸಿ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಕೆಎಸ್ಐಐಡಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಎನ್ನೆಸ್ಸೆಸ್ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಪ್ರಮುಖರಾದ ಗುರುನಾಥ ಕೊಳ್ಳುರ್, ಈಶ್ವರಸಿಂಗ್ ಠಾಕೂರ್, ರೇವಣಸಿದ್ದಪ್ಪ ಜಲಾದೆ, ರೌಫೊದ್ದೀನ್ ಕಚೇರಿವಾಲಾ, ಉಪೇಂದ್ರ ದೇಶಪಾಂಡೆ, ಶಿವರಾಜ ಕುದರೆ, ಹಣಮಂತ ಖೂಬಾ, ವಿಶ್ವನಾಥ ಖೂಬಾ, ಅಶೋಕ ಖೂಬಾ, ಮಾಳಪ್ಪ ಅಡಸಾರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಫರಸ್ಡೊ, ಕಾರ್ಯನಿರ್ವಾಹಕ ಅಧಿಕಾರಿ ನಾಗಪ್ಪ ಇತರರಿದ್ದರು. ಗ್ರಾಪಂ ಚುನಾವಣೆ ಕೆಲಸ ನಿಮಿತ್ತ ಡಿಸಿ ರಾಮಚಂದ್ರನ್ ಆರ್. ಕಾರ್ಯಕ್ರಮದಿಂದ ದೂರ ಉಳಿದಿದ್ದರು.

ಹುಮನಾಬಾದ್ ಬಳಿ ರಿಂಗ್ ರೋಡ್
325 ಕೋಟಿ ರೂ. ಅನುದಾನದಲ್ಲಿ ಬೀದರ್-ಹುಮನಾಬಾದ್ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ವಿಶೇಷವೆಂದರೆ ಹುಮನಾಬಾದ್ ಹತ್ತಿರ ರಿಂಗ್ ರಸ್ತೆ ಯೋಜನೆ ಹೊಸದಾಗಿ ಸೇರ್ಪಡೆಯಾಗಿದೆ. ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಿಂಗ್ ರಸ್ತೆ ನಿರ್ಮಿಸಿ ಬೀದರ್ ಕಡೆಯಿಂದ ಹೋಗುವ ವಾಹನಗಳನ್ನು ಹೈದರಾಬಾದ್-ಮುಂಬೈ ಹೆದ್ದಾರಿಗೆ ಜೋಡಿಸುವ ಉದ್ದೇಶ ಹೊಂದಲಾಗಿದೆ. ಹುಮನಾಬಾದ್ ಬಳಿಯ ಧುಮ್ಮನಸೂರ ಹತ್ತಿರ ಬೈಪಾಸ್ ರಸ್ತೆ ಮಾಡಲಾಗುತ್ತಿದೆ. ಇಲ್ಲಿಂದ ಗಡವಂತಿ ಮೂಲಕ ಆರ್ ಟಿಒ ಕಚೇರಿಗೆ ಜೋಡಿಸುವ ಉದ್ದೇಶ ಹೊಂದಲಾಗಿದೆ.

ಖಂಡ್ರೆಗೆ ಮಾಡಲು ಕೆಲಸವಿಲ್ಲ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಕೆಲಸ ಮಾಡಲು ಏನೂ ಇಲ್ಲ. ಹೀಗಾಗಿ ಅಭಿವೃದ್ಧಿ ಕೆಲಸಗಳ ವಿರುದ್ಧ ದೂರು ನೀಡುವುದೇ ಅವರ ಕೆಲಸವಾಗಿದೆ ಎಂದು ಸಂಸದ ಭಗವಂತ ಖೂಬಾ ದೂರಿದ್ದಾರೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಖಂಡ್ರೆ ದೂರು ನೀಡಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಖೂಬಾ, 60 ವರ್ಷಗಳಿಂದ ಇದೇ ಕೆಲಸ ಮಾಡುತ್ತ ಬರುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಕಾರ್ಯಕರ್ತರು ಬ್ಯಾನರ್ ಹಾಕಿದ್ದಾರೆ. ಬೇರೆ ಯಾವುದೇ ಶಾಸಕರಿಗೆ ನೀತಿ ಸಂಹಿತಿ ಉಲ್ಲಂಘನೆ ಅನಿಸಿಲ್ಲ. ಕ್ಷುಲ್ಲಕ ರಾಜಕಾರಣ ಮಾಡುವ ಖಂಡ್ರೆ, ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಿದರೆ ಅಭಿವೃದ್ಧಿಗೆ ವಿರುದ್ಧವಾಗಿ ನಡೆದುಕೊಂಡಂತೆ. ಬರುವ ಚುನಾವಣೆಯಲ್ಲಿ ಜನರು ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ಟೀಕಿಸಿದರು.

ಎಲ್ಲ 8 ದಿಕ್ಕುಗಳಿಂದ ಜಿಲ್ಲಾ ಕೇಂದ್ರ ಬೀದರ್ಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗಳಾಗಿ ಮಾರ್ಪಟ್ಟಿವೆ. ಇದೀಗ ಚಾಲನೆ ನೀಡಿರುವ ಎರಡು ಹೆದ್ದಾರಿ ಹಾಗೂ ಒಂದು ಮೇಲ್ಸೇತುವೆ ಕಾಮಗಾರಿಯನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಲಾಗುವುದು.| ಭಗವಂತ ಖೂಬಾಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net