₹ 380 ಕೋಟಿ ಕ್ರಿಯಾಯೋಜನೆ ಸಿದ್ಧಪಡಿಸಿ

dc office meeting
Published on

ಬೀದರ್: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್.ಡಿಬಿ)ಯಿಂದ ಜಿಲ್ಲೆಗೆ 380 ಕೋಟಿ ರೂ. ಕ್ರಿಯಾಯೋಜನೆ ಶೀಘ್ರ ಸಿದ್ಧಪಡಿಸಿ ಅನುಮೋದನೆ ಪಡೆದು ಅನುಷ್ಠಾನ ಮಾಡುವ ಕೆಲಸ ಮಾಡಬೇಕಾಗಿದ್ದರಿಂದ ಅಧಿಕಾರಿಗಳು ಕೆಲಸಕ್ಕೆ ವೇಗ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆಕೆಆರ್.ಡಿಬಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ಕೆಕೆಆರ್.ಡಿಬಿಯಲ್ಲಿ 5 ಸಾವಿರ ಕೋಟಿ ರೂ. ಅನುದಾನ ಲಭ್ಯವಿದ್ದು, ಪ್ರಥಮ ಬಾರಿಗೆ ಬೀದರ್ ಜಿಲ್ಲೆಗೆ ಹೆಚ್ಚಿನ ಅನುದಾನ ಮೀಸಲು ಇಡಲಾಗಿದೆ. ಮಂಡಳಿ ಮ್ಯಾಕ್ರೋದಲ್ಲಿ 116 ಕೋಟಿ ರೂ., ಮೈಕ್ರೋದಲ್ಲಿ 270 ಕೋಟಿ ರೂ.ಅನುದಾನ ಇದೆ ಎಂದರು.
ಮಂಡಳಿಯ ಮೈಕ್ರೋ ಯೋಜನೆಯಲ್ಲಿ ಶೇ.70 ಅಭಿವೃದ್ಧಿ ಸೂಚ್ಯಂಕ ಪ್ರಕಾರ ಆಯಾ ಕ್ಷೇತ್ರದ ಶಾಸಕರಿಗೆ ಅನುದಾನ ಹಂಚಿಕೆಯಾಯಾಗುತ್ತದೆ. ವಾರದೊಳಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಬೇಕು ಎಂದು ಹೇಳಿದರು.
ಈ ಹಿಂದೆ ಮಂಡಳಿಯಿಂದ ನಡೆಯುತ್ತಿರುವ ಕಾಮಗಾರಿಗಳಿಗೆ ಶೇ.24 ಮಾತ್ರ ಹಣ ಖರ್ಚಾಗಿದೆ. ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅನುಷ್ಠಾನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಮ್ಮ ಕ್ಷೇತ್ರದ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ರಿಪೇರಿ ಮತ್ತು ಮೂಲ ಸೌಕರ್ಯಗಳಿಗಾಗಿ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಹೇಳಿದರು.
ಶಾಸಕರಾದ ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಭೀಮರಾವ್ ಪಾಟೀಲ್, ಅರವಿಂದಕುಮಾರ ಅರಳಿ, ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಎಸ್ಪಿ ಚನ್ನಬಸವಣ್ಣ ಲಂಗೋಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net