

ಬೀದರ್: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಬಸವಕಲ್ಯಾಣ ತಹಸೀಲ್ದಾರ್ ಕಚೇರಿ ದ್ವಿತೀಯ ದರ್ಜೆ ಭೂಮಾಪಕ ಅಬ್ದುಲ್ ರಹೀಮ್ ಬಡೇಸಾಬ್ಗೆ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಕೇವಲ 1500 ರೂ. ಲಂಚದ ಬೇಡಿಕೆ ಇಟ್ಟಿದ್ದಕ್ಕೆ ಅಬ್ದುಲ್ ರಹೀಮ್ ಸೆರೆವಾಸ ಅನುಭವಿಸಬೇಕಾಗಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಬುಧವಾರ ಶಿಕ್ಷೆ ಪ್ರಕಟಿಸಿದರು.
ಉಜಳಂಬ ಗ್ರಾಮದ ಸರ್ವೇ ನಂ.25ರ 17.27 ಎಕರೆ ಕೃಷಿ ಜಮೀನನ್ನು ಒಟ್ಟುಗೂಡಿಸಲು ಬಸವಕಲ್ಯಾಣ ತಾಲೂಕಿನ ಹೊನ್ನಾಳ್ಳಿಯ ದಿಲೀಪ ಕಿಶನರಾವ್ ತಹಸಿಲ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕಾಗಿ ಭೂಮಾಪಕ ಅಬ್ದುಲ್ ರಹೀಮ್ 1500 ರೂ. ಲಂಚದ ಬೇಡಿಕೆ ಇಟ್ಟಿದ್ದ. ದಿಲೀಪ ಅವರಿಂದ 2010ರ ಫೆ.10ರಂದು ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಸಿಂದಬಂದಗಿಯ ಅಬ್ದುಲ್ ರಹೀಮ್ ಸಿಕ್ಕಿಬಿದ್ದಿದ್ದರು. ಬೀದರ್ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಆರ್.ಎಸ್. ಜಹಾಗೀರದಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಅಪರಾಧ ಸಾಬೀತಾಗಿದ್ದರಿಂದ ತೀರ್ಪು ನೀಡಿ ಮೂರು ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ಸಾವಿರ ದಂಡ ವಿಧಿಸಿದೆ. ತಪ್ಪಿದ್ದಲ್ಲಿ ಹೆಚ್ಚುವರಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದ್ದಾರೆ. ಲೋಕಾಯುಕ್ತ ಪರ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ್ ಶ್ರೀಮಾಳೆ ವಾದ ಮಂಡಿಸಿದ್ದರು.