ಒಂದೇ ರಾಷ್ಟ್ರ, ಒಂದೇ ಗ್ಯಾಸ್‌ ಗ್ರಿಡ್‌ ಗುರಿ

Published on

ಮಂಗಳೂರು-ಕೊಚ್ಚಿನ್‌ ಪೈಪ್‌ಲೈನ್‌ ಉದ್ಘಾಟಿಸಿ ಪ್ರಧಾನಿ ಮೋದಿ ಮಾತು

ಮಂಗಳೂರಿನ ಎಂಸಿಎಫ್‌ನಲ್ಲಿ ಅನಿಲ ಸ್ವೀಕರಣಾ ಕೇಂದ್ರವಿದ್ದು, ಅದರ ಆವರಣದಲ್ಲಿ ಸಮಾರಂಭ ಏರ್ಪಡಿಸಲಾಗಿದ್ದು ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಶಾಸಕರಾದ ಡಾ.ಭರತ್‌ ಶೆಟ್ಟಿ, ಮಂಗಳೂರು ಮೇಯರ್‌ ದಿವಾಕರ್‌ ಮುಂತಾದವರು ಭಾಗವಹಿಸಿದ್ದರು.

ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌, ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದರು.

ಸಿಎಂ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಕೊಚ್ಚಿನ್‌ - ಮಂಗಳೂರು ಪೈಪ್‌ಲೈನ್‌ನಿಂದಾಗಿ ಕರಾವಳಿಯ ಉದ್ದಿಮೆಗಳಿಗೆ ಶುದ್ಧ ಇಂಧನ ಸಿಕ್ಕಿದಂತಾಗಿದೆ ಅಲ್ಲದೆ ಲಕ್ಷಾಂತರ ಮನೆಗಳಿಗೆ ಕಡಿಮೆ ವೆಚ್ಚದ ಅನಿಲ ಪೂರೈಕೆಯಾಗಲಿದೆ ಎಂದರು.

ಕೇರಳ, ಕರ್ನಾಟಕದ ಬೀಚ್‌ ನಗರಗಳನ್ನು ಬ್ಲೂ ಇಕಾನಮಿ ಮಾಡುವ ಗುರಿ ಹಾಕಿಕೊಂಡಿದ್ದು, ಇದು ಆತ್ಮನಿರ್ಭರ ಭಾರತದ ಭಾಗವಾಗಿಸಲಾಗಿದೆ. ಬಹುವಿಧ ಸಂಪರ್ಕ, ಕರಾವಳಿ ರಸ್ತೆ ನಿರ್ಮಾಣ ಇತ್ಯಾದಿಗೆ ಇದರಲ್ಲಿ ಒತ್ತು ನೀಡಲಾಗುತ್ತದೆ ಎಂದರು.

ದೇಶದ ಮೊದಲ ಅಂತಾರಾಜ್ಯ ಗ್ಯಾಸ್‌ಪೈಪ್‌ಲೈನ್‌ ೧೯೮೭ರಲ್ಲಿ ಆಗಿತ್ತು, ೨೦೧೪ರ ವೇಳೆಗೆ ದೇಶದಲ್ಲಿ ೧೫ ಸಾವಿರ ಕಿ.ಮೀ ಗ್ಯಾಸ್‌ ಪೈಪ್‌ಲೈನ್‌ನಷ್ಟು ನಿರ್ಮಾಣಗೊಂಡಿತು. ಆದರೆ ಕೇವಲ ೬ ವರ್ಷಗಳಲ್ಲಿ ೧೭ ಸಾವಿರ ಕಿ.ಮೀ ಗ್ಯಾಸ್‌ ಪೈಲ್‌ಲೈನ್‌ ಪೂರ್ಣತೆಯ ಹಂತ ತಲಪಿದೆ, ೧೯೯೨ರಲ್ಲಿ ಮೊದಲ ಸಿಎನ್‌ಜಿ ಸ್ಟೇಷನ್‌ ಬಂದಿತು, ೨೦೧೪ರಲ್ಲಿ ಸಂಖ್ಯೆ ೯೦೦ಕ್ಕಿಂತ ಹೆಚ್ಚಿರಲಿಲ್ಲ. ಕಳೆದ ೬ ವರ್ಷದಲ್ಲಿ ೧೫೦೦ ಸ್ಟೇಷನ್‌ ನಿರ್ಮಾಣಗೊಂಡಿದ್ದು ಇದರನ್ನು೧೦ ಸಾವಿರಕ್ಕೆ ಏರಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.

೨೧ನೇ ಶತಮಾನದಲ್ಲಿ ಯಾವೆಲ್ಲಾ ರಾಷ್ಟ್ರಗಳು ಬಹುವಿಧ ಸಂಪರ್ಕ ಅಭಿವೃದ್ಧಿ ಹಾಗೂ ಶುದ್ಧ ಇಂಧನದಲ್ಲಿ ಸಾಧನೆ ಮಾಡುತ್ತವೆಯೋ ಆ ರಾಷ್ಟ್ರಗಳು ಔನ್ನತ್ಯಕ್ಕೆ ಏರುತ್ತವೆ ಎಂಬ ನಂಬಿಕೆ ಇದೆ, ಅದಕ್ಕೆ ಪೂರಕವಾಗಿ ನಮ್ಮ ದೇಶ ಮುನ್ನಡೆಯುತ್ತಿದ್ದು, ರೈಲು, ಹೆದ್ದಾರಿ, ವಾಯುಯಾನ, ನೌಕಾಯಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ.

ಒಂದೇ ಗ್ಯಾಸ್‌ ಗ್ರಿಡ್‌ ರೂಪಿಸುವ ನಿಟ್ಟಿನಲ್ಲಿ ಹಲವಾರು ನೀತಿಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ, ಒಟ್ಟು ಇಂಧನಬುಟ್ಟಿಯಲ್ಲಿ ಸಿಎನ್‌ಜಿ ಅನಿಲದ ಪಾಲನ್ನು ಶೇ ೬ರಿಂದ ಶೇ ೧೫ಕ್ಕೆ ಏರಿಸುವ ಉದ್ದೇಶ ಹಾಕಿಕೊಳ್ಳಲಾಗಿದೆ. ತೈಲ ಮತ್ತು ಅನಿಲ ಕ್ಷೇತ್ರ್ದದಲ್ಲಿ ಸಾವಿರಾರು ಕೋಟಿ ರೂ ಮೊತ್ತದ ಹೂಡಿಕೆ ಮಾಡಲಾಗುತ್ತಿದೆ, ಅದರ ಭಾಗವಾಗಿ ಕೊಚ್ಚಿನ್‌ - ಮಂಗಳೂರು ಪೈಪ್‌ಲೈನ್‌ ನಿರ್ಮಾಣಗೊಂಡಿದೆ ಎಂದರು.

ಮಂಗಳೂರು-ಕೊಚ್ಚಿನ್‌ ಮಧ್ಯೆ ಗೈಲ್‌ನವರ ೪೫೦ ಕಿ.ಮೀ ಉದ್ದದ ಸಿಎನ್‌ಜಿ ಕೊಳವೆ ಮಾರ್ಗವನ್ನು ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ದೇಶಕ್ಕೆ ಸಮರ್ಪಣೆಗೊಳಿಸಿ ಅವರು ಮಾತನಾಡಿದರು.

ಮಂಗಳೂರು: ಕೊಚ್ಚಿನ್-ಮಂಗಳೂರು ಮಧ್ಯೆ ಕಾರ್ಯಾರಂಭಿಸಿರುವ ಸಿಎನ್‌ಜಿ ಪೈಪ್‌ಲೈನ್‌ ಕೇವಲ ಅನಿಲ ಕೊಳವೆ ಮಾರ್ಗವಲ್ಲ ಬದಲಾಗಿ ಕೇರಳ ಹಾಗೂ ಕರ್ನಾಟಕದಲ್ಲಿ ಉದ್ಯೋಗ ಹಾಗೂ ಪರಿಸರ ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ, ಮುಂದೆ ಒಂದೇ ರಾಷ್ಟ್ರ, ಒಂದೇ ಗ್ಯಾಸ್‌ ಗ್ರಿಡ್‌ ರೂಪಿಸುವತ್ತ ದೇಶ ಮುನ್ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net