

ಬಾಗಲಕೋಟೆ: ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡಲಿಕ್ಕೆ ಅವಕಾಶ ನೀಡಿದ್ದು, ಎಪ್ರೀಲ್ ೨೬ ಮತ್ತು ೨೭ ರಂದು ೮೫ ವರ್ಷ ಮೇಲ್ಪಟ್ಟ ವೃದ್ದರು, ವಿಶೇಷ ಚೇತನರು ಹಾಗೂ ಕೋವಿಡ್-೧೯ ಶಂಕಿತ ಅಥವಾ ಭಾದಿತ ವ್ಯಕ್ತಿಗಳು ಮನೆಯಿಂದಲೇ ಮತದಾನ ಮಾಡಲಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
ಬಾಗಲಕೋಟೆ ಮತಕ್ಷೇತ್ರದಲ್ಲಿ ನರಗುಂದ ಮತಕ್ಷೇತ್ರ ಸೇರಿದಂತೆ ಒಟ್ಟು ೨೧೩೯ ಮತದಾರರು ಮನೆಯಿಂದಲೇ ಮತದಾನ ಹಕ್ಕನ್ನು ಚಲಾಯಿಸಲಿದ್ದಾರೆ. ಅದರಲ್ಲಿ ೮೫ ವರ್ಷ ಮೇಲ್ಪಟ್ಟವರು ೧೪೨೦ ಹಾಗೂ ವಿಶೇಷ ಚೇತನರು ೭೧೯ ಜನ ಇದ್ದಾರೆ. ಮತದಾನಕ್ಕೆ ೯೭ ಮಾರ್ಗಗಳನ್ನು ಮಾಡಲಾಗಿದ್ದು, ಇಬ್ಬರು ಮತಗಟ್ಟೆ ಅಧಿಕಾರಿಗಳು, ಮೈಕ್ರೋ ಆಬ್ಜರವರ್, ಪೊಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್ ತಲಾ ಒಬ್ಬರು ಸೇರಿದ ತಂಡವು ನೋಂದಾಯಿತ ಮತದಾರ ಮನೆಗೆ ತೆರಳಿ ಮತದಾನ ಮಾಡಿಸಲಿದ್ದಾರೆ. ಈ ಕಾರ್ಯಕ್ಕೆ ಒಟ್ಟಾರೆಯಾಗಿ ೪೮೫ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ನಮೂನೆ-೧೨ಡಿರಡಿ ಮನೆಯಿಂದ ಅಂಚೆ ಮತಪತ್ರ ಮೂಲಕ ಮತದಾನ ಮಾಡಲು ಅರ್ಜಿ ಸಲ್ಲಿಸಿ ಅರ್ಹರಾದ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲಿಕ್ಕೆ ನಿಯೋಜಿಸಲಾದ ತಂಡವು ಎಪ್ರೀಲ್ ೨೬ ರಂದು ತಮ್ಮ ಮನೆಗೆ ತೆರಳಿದಾಗ ಅರ್ಹ ಮತದಾರರು ಮನೆಯಲ್ಲಿಯೇ ಇದ್ದು, ಅಂಚೆ ಮತಪತ್ರ ಮೂಲಕ ಮತದಾನ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ. ಆ ಸಮಯದಲ್ಲಿ ಮತದಾರ ಲಭ್ಯವಿಲ್ಲದಿದ್ದರೆ, ಎಪ್ರೀಲ್ ೨೭ ರಂದು ಮತ್ತೊಂದು ಬಾರಿ ಭೇಟಿ ಕೊಡಲಾಗುತ್ತದೆ. ಆಗಲೂ ಮತದಾರ ಲಭ್ಯವಾಗದಿದ್ದರೆ ಮತದಾನ ಮಾಡಲು ಅವಕಾಶ ಇರುವುದಿಲ್ಲ. ಅಲ್ಲದೇ ಗೈರು ಹಾಜರಿ ಮತದಾರರು ಮತಗಟ್ಟೆಗೆ ಬಂದು ಮತ ಹಾಕಲು ಅವಕಾಶ ಇರುವುದಿಲ್ಲವೆಂದು ತಿಳಿಸಿದ್ದಾರೆ.
ಮುಧೋಳ ಕ್ಷೇತ್ರದಲ್ಲಿ ೧೮೮ ಹಿರಿಯ ನಾಗರಿಕರು, ೧೦೧ ವಿಶೇಷ ಚೇತನರು ಸೇರಿ ಒಟ್ಟು ೨೮೯ ಮತದಾರರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ತೇರದಾಳ ಕ್ಷೇತ್ರದಲ್ಲಿ ೨೦೬ ಹಿರಿಯ ನಾಗರಿಕರು, ೧೧೭ ವಿಶೇಷ ಚೇತನರು ಸೇರಿ ಒಟ್ಟು ೩೨೩, ಜಮಖಂಡಿ ಮತಕ್ಷೇತ್ರದಲ್ಲಿ ೯೭ ಹಿರಿಯ ನಾಗರಿಕರು, ೫೦ ವಿಶೇಷ ಚೇತನರು ಸೇರಿ ಒಟ್ಟು ೧೪೭, ಬೀಳಗಿ ಮತಕ್ಷೇತ್ರದಲ್ಲಿ ೨೯೨ ಹಿರಿಯ ನಾಗರಿಕರು, ೧೨೫ ವಿಶೇಷ ಚೇತನರು ಸೇರಿ ಒಟ್ಟು ೪೧೭, ಬಾದಾಮಿ ಮತಕ್ಷೇತ್ರದಲ್ಲಿ ೨೧೦ ಹಿರಿಯ ನಾಗರಿಕರು, ೧೧೬ ವಿಶೇಷ ಚೇತನರು ಸೇರಿ ಒಟ್ಟು ೩೨೬, ಬಾಗಲಕೋಟೆ ಮತಕ್ಷೇತ್ರದಲ್ಲಿ ೧೯೮ ಹಿರಿಯ ನಾಗರಿಕರು, ೮೨ ವಿಶೇಷ ಚೇತನರು ಸೇರಿ ಒಟ್ಟು ೨೮೦ ಹಾಗೂ ಹುನಗುಂದ ಮತಕ್ಷೇತ್ರದಲ್ಲಿ ೧೪೬ ಹಿರಿಯ ನಾಗರಿಕರು, ೭೩ ವಿಶೇಷ ಚೇತನರು ಸೇರಿ ಒಟ್ಟು ೨೧೯ ಹಾಗೂ ನರಗುಂದ ಮತಕ್ಷೇತ್ರದಲ್ಲಿ ೮೩ ಹಿರಿಯ ನಾಗರಿಕರು, ೫೫ ವಿಶೇಷ ಚೇತನರು ಸೇರಿ ಒಟ್ಟು ೧೩೮ ಮತದಾರರು ಮನೆಯಿಂದಲೇ ಮತದಾನ ಮಾಡಲಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.