೫ ಸಾವಿರ ಲಂಚಕ್ಕೆ ೫ ವರ್ಷ ಜೈಲು !

Somshekhar Patil
ಸೋಮಶೇಖರ ಪಾಟೀಲ್‌
Published on

ಬೀದರ್: ಐದು ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸೋಮಶೇಖರ ಪಾಟೀಲ್‌ಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು ೫ ವರ್ಷ ಜೈಲು ಶಿಕ್ಷೆ ಹಾಗೂ ೧.೫೦ ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ಐದು ಸಾವಿರದ ಲಂಚದ ಬೇಡಿಕೆ ಇಟ್ಟಿದ್ದಕ್ಕೆ ಇದೀಗ ಸೋಮಶೇಖರ ಐದು ವರ್ಷದ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಅವರು ಗುರುವಾರ ಶಿಕ್ಷೆ ಪ್ರಕಟಿಸಿದರು.

ಇಲ್ಲಿನ ಗುರುನಾನಕ್ ಬಡಾವಣೆಯ ಈಶ್ವರಿ ಅವರ ಹೆಸರಿನಲ್ಲಿರುವ ಬೀದರ್ ತಾಲೂಕಿನ ಹಮೀಲಾಪುರ ಗ್ರಾಮದ ೪.೨೦ ಎಕರೆ ಜಮೀನನ್ನು ಜಿಲ್ಲಾಧಿಕಾರಿ ಅವರು ಭೂಪರಿವರ್ತನೆ ಆದೇಶ ಮಾಡಿದ್ದರು. ಇದನ್ನು ಸಂಬಂಧಪಟ್ಟ ಕಚೇರಿಗಳಿಗೆ ಆದೇಶದ ಪ್ರತಿ ಡಿಸ್‌ಪ್ಯಾಚ್ ಮಾಡಲು ಸೋಮಶೇಖರ ಪಾಟೀಲ್ ೫ ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟದರು.

ಈಶ್ವರಿ ಅವರ ಪತಿ ವೀರಶಟ್ಟಿ ಕುಂಚಿಗೆ ಅವರಿಂದ ೨೦೧೨ರ ಆ.೨೮ರಂದು ಲಂಚ ಹಣದ ಪಡೆಯುವಾಗ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯಲ್ಲಿ ಸೋಮಶೇಖರ ಸಿಕ್ಕಿಬಿದ್ದಿದ್ದರು. ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಭಾಸು ಚವ್ಹಾಣ್ ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ವಿರುದ್ಧದ ಆರೋಪಗಳು ಸಾಬೀತು ಆಗಿದ್ದರಿಂದ ಗುರುವಾರ ತೀರ್ಪು ನೀಡಿ, ಐದು ವರ್ಷ ಜೈಲು ಶಿಕ್ಷೆ ಹಾಗೂ ೧.೫೦ ಲಕ್ಷ ರೂ. ದಂಡ ವಿಧಿಸಿದರು.ದಂಡ ಭರಿಸಲು ತಪ್ಪಿದಲ್ಲಿ ೬ ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದರು. ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ ಶ್ರೀಮಾಳೆ ವಾದ ಮಂಡಿಸಿದ್ದರು.

ದೂರುದಾರ ವಿರುದ್ಧ ಕೇಸ್
ಲಂಚ ಸ್ವೀಕಾರ ಪ್ರಕರಣದ ದೂರುದಾರ ವೀರಶೆಟ್ಟಿ ಪ್ರಭುಶೆಟ್ಟಿ ಕುಂಚಿಗೆ ವಿರುದ್ಧವೇ ದೂರು ದಾಖಲಿಸಲು ಕೋರ್ಟ್ ಆದೇಶಿಸಿದೆ. ದೂರಿನ ವಿರುದ್ಧ ವೀರಶೆಟ್ಟಿ ಸುಳ್ಳು ಸಾಕ್ಷಿ ನೀಡಿದ್ದರಿಂದ ಪ್ರತ್ಯೇಕ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಅವರು ಆದೇಶ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net