

ಸುರಪುರ: ಕೊಳವೆಬಾವಿ ನೀರು ಸೇವಿಸಿ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡ ಚಿಕ್ಕನಹಳ್ಳಿ ಗ್ರಾಮದ ೨೨ ಮಕ್ಕಳ ಆರೋಗ್ಯದಲ್ಲಿ ಮಂಗಳವಾರ ಚೇತರಿಕೆ ಕಂಡು ಬಂದಿದ್ದು, ಮತ್ತೆ ನಾಲ್ವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟಿನಲ್ಲಿ ವಾಂತಿ-ಭೇದಿ ಗ್ರಾಮದಲ್ಲಿ ಮುಂದುವರಿದಂತಾಗಿದೆ.
ವಿಷಪೂರಿತ ಆಹಾರ ಸೇವಿಸಿದ್ದ ಕೆಲ ಬಂಗಾಳಿಗಳು ಇನ್ನೂ ಗುಣಮುಖರಾಗಿಲ್ಲ. ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದರೆ ಇನ್ನಿಬ್ಬರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲೂಕು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗರೀಮಾ ಪನ್ವಾರ್ ಚಿಕ್ಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.
ಗ್ರಾಮದ ಪ್ರತಿ ಬೀದಿಗಳಲ್ಲಿ ಸಂಚರಿಸಿ ಸ್ವಚ್ಛತೆ ಪರಿಶೀಲಿಸಿದರು. ರಸ್ತೆ ಮೇಲೆ ತ್ಯಾಜ್ಯ ನೀರು ಹರಿಯುವುದು ರೋಗಕ್ಕೆ ಮೂಲ ಕಾರಣ. ಕೂಡಲೇ ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಿ ಅನುಮತಿ ಪಡೆದು ಕೆಲಸ ಆರಂಭಿಸಬೇಕು ಎಂದು ತಾಪಂ ಇಒಗೆ ಸೂಚಿಸಿದರು.
ಗ್ರಾಮದಲ್ಲಿ ಸಂಪೂರ್ಣ ಸ್ವಚ್ಛತೆ ಕೈಗೊಳ್ಳಬೇಕು. ಸಾರ್ವಜನಿಕರ ನಿತ್ಯ ಕಾರ್ಯಗಳಿಗೆ ಅಡ್ಡಿಯಾಗದಂತೆ ಕೆಲಸ ಮಾಡಬೇಕು. ತೊಂದರೆ ಕೊಟ್ಟರೆ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿ ಮಾಡಲಾಗುವುದು. ಶಾಲೆಯಲ್ಲಿ ಬಾಲಕ ಮತ್ತು ಬಾಲಕಿರಿಗೆ ಶೌಚಗೃಹ ಹಾಗೂ ಸಾರ್ವಜನಿಕರಿಗೆ ಸಮುದಾಯ ಶೌಚಗೃಹ ನಿರ್ಮಿಸಿಕೊಡುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹಿರೇಗೌಡರ ರೋಗಿಗಳ ಆರೋಗ್ಯ ವಿಚಾರಿಸಿದರು. ತಾಪಂ ಇಒ ಬಸವರಾಜ ಸಜ್ಜನ್, ಟಿಎಚ್‌ಒ ಡಾ.ಆರ್.ವಿ.ನಾಯಕ ಇತರರಿದ್ದರು.