

ಮಡಿಕೇರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಗರದ ರೆಡ್‌ಕ್ರಾಸ್ ಭವನದಲ್ಲಿ ಗುರುವಾರ ಮಕ್ಕಳ ದಿನಾಚರಣೆ ಮತ್ತು ಅಂಗನವಾಡಿ ದಿನ ಸಮಾರಂಭ ನಡೆಯಿತು.
ರೋಟರಿ ಮಡಿಕೇರಿ ವುಡ್ಸ್ ಪ್ರಾಯೋಜಕತ್ವ ನೀಡುವುದರೊಂದಿಗೆ ಸಕ್ರಿಯವಾಗಿ ಭಾಗವಹಿಸಿದ್ದು, ಸುಮಾರು ೧೮೦ ಪುಟಾಣಿ ಮಕ್ಕಳಿಗೆ ಆಟಿಕೆಗಳು, ಸರ್ಟಿಫಿಕೇಟ್‌ಗಳು, ಡ್ರಾಯಿಂಗ್ ಪುಸ್ತಕಗಳು ಮತ್ತು ಬಹುಮಾನ ವಿತರಿಸಲಾಯಿತು. ಪುಟಾಣಿ ಮಕ್ಕಳಿಗೆ ಹಾಡು, ನೃತ್ಯ, ಸಣ್ಣ ಕತೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸಮಾರಂಭದಲ್ಲಿ ವುಡ್ಸ್ ಅಧ್ಯಕ್ಷ ವಸಂತ್ ಕುಮಾರ್ ಹಾಗೂ ಪ್ರವೀಣ್ ಕುಮಾರ್, ರೆಡ್‌ಕ್ರಾಸ್ ಸಭಾಪತಿಗಳಾದ ಬಿ.ಕೆ.ರವೀಂದ್ರ ರೈ, ರೆಡ್‌ಕ್ರಾಸ್ ಕಾರ್ಯದರ್ಶಿ ಎಚ್.ಆರ್.ಮುರಳೀಧರ್, ಮಡಿಕೇರಿಯ ಲಯನ್ಸ್ ಕ್ಲಬ್‌ನ ಲಯನ್ ಕನ್ನಂಡ ಕವಿತಾ ಭಾಗವಹಿಸಿದ್ದರು.
ಹಸಿರು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟನೆ ನೆರವೇರಿಸಿ ನಂತರ ಮಾತನಾಡಿದ ವುಡ್ಸ್ ಅಧ್ಯಕ್ಷ ವಸಂತ್ ಕುಮಾರ್, ಮಕ್ಕಳ ದಿನಾಚರಣೆ ಮತ್ತು ಅಂಗನವಾಡಿ ದಿನವನ್ನು ಆಚರಣೆ ಮಾಡುವುದರ ಮೂಲಕ ಮಕ್ಕಳಿಗೆ ಖುಷಿಯ ವಾತಾವರಣ ಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿ ಆಗಿದೆ. ಪುಟಾಣಿ ಮಕ್ಕಳಲ್ಲಿ ಸದಭಿರುಚಿಯ ಜತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿ, ಸಮಾಜಕ್ಕೆ, ದೇಶಕ್ಕೆ ಒಳ್ಳೆಯ ಪ್ರಜೆಯನ್ನು ಕೊಡುವಲ್ಲಿ ಅಂಗನವಾಡಿಯೂ ಕೂಡ ಮಹತ್ತರ ಪಾತ್ರವಹಿಸಿದೆ ಎಂದರು.
ರೋಟರಿ ಸಂಸ್ಥೆಯು ಹಲವಾರು ವರ್ಷಗಳಿಂದ ಅಂಗನವಾಡಿ ಜತೆ ಗುರುತಿಸಿಕೊಂಡು ಇಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ವಿಶೇಷವಾಗಿ ಈ ಸಾಲಿನಲ್ಲಿ ತನ್ನ ವಾರ್ಷಿಕ ಚಟುವಟಿಕೆಯಲ್ಲಿ ಅಂಗನವಾಡಿಗೆ ವಿಶೇಷ ಆಧ್ಯತೆ ನೀಡುತ್ತಿದೆ ಎಂದರು.
ರೆಡ್‌ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ, ಅಂಗನವಾಡಿ ಅಧಿಕಾರಿಗಳಾದ ಸವಿತಾ, ಮುತ್ತಮ್ಮ ಮತ್ತು ಮಡಿಕೇರಿ ನಗರದಲ್ಲಿರುವ ಎಲ್ಲಾ ಅಂಗನವಾಡಿ ಶಿಕ್ಷಕಿಯರು, ಸಹಾಯಕರು, ಪಾಲಕರು ಭಾಗವಹಿಸಿದ್ದರು. ಮಕ್ಕಳ ಪಾಲಕರು ಸೇರಿದಂತೆ ಸುಮಾರು ೨೫೦ಕ್ಕೂ ಹೆಚ್ಚಿನ ಸಾರ್ವಜನಿಕರು ಭಾಗವಹಿಸಿದ್ದರು.