

ಕೊಡೇಕಲ್: ಸತತವಾಗಿ ಮಹಾರಾಷ್ಟçದಲ್ಲಿ ಮಳೆಯಾಗುತ್ತಿರುವ ಕಾರಣ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ೧.೫೦ ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವ ಕಾರಣ ಜಲಾಶಯದಿಂದ ೧.೪೪ ಲಕ್ಷ ಕ್ಯೂಸೆಕ್ ನೀರು ೨೫ ಗೇಟುಗಳ ಮೂಲಕ ಮಂಗಳವಾರ ಕೃಷ್ಣೆಗೆ ಹರಿಸಲಾಗಿದೆ.
ಸೋಮವಾರ ಸಂಜೆ ವೇಳೆಗೆ ನದಿಗೆ ೧.೪೫ ಲಕ್ಷ ಕ್ಯೂಸೆಕ್ ಪ್ರಮಾಣ ನೀರಿನ ಒಳಹರಿವು ಇದ್ದು, ಜಲಾಶಯದ ೨೫ ಗೇಟುಗಳ ಮೂಲಕ ನದಿಗೆ ಅಷ್ಟೇ ಪ್ರಮಾಣದ ನೀರು ಹರಿಸಲಾಗುತ್ತಿತ್ತು. ಆದರೆ ಮಂಗಳವಾರ ಬೆಳಗ್ಗೆ ಆಲಮಟ್ಟಿ ಜಲಾಶಯದಿಂದ ನದಿಗೆ ೧.೫೦ ಲಕ್ಷ ಕ್ಯೂಸೆಕ್ ಪ್ರಮಾಣದ ನೀರು ಹರಿಸಿದ್ದರಿಂದ ಅಧಿಕಾರಿಗಳು ಜಲಾಶಯದ ನೀರಿನ ಸಂಗ್ರಹಮಟ್ಟ ಕಾಯ್ದುಕೊಂಡು ೧.೪೪ ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ.
ಕೃಷ್ಣೆಗೆ ಬಿಡುವ ನೀರು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಕಾರಣಕ್ಕು ನದಿ ತೀರದ ಗ್ರಾಮಸ್ಥರು ಬಹಳ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.
ನದಿ ತೀರದ ಗ್ರಾಮಗಳಾದ ಗೆದ್ದಲಮರಿ ಜುಮಾಲಪುರ ಸೇರಿದಂತೆ ಇತರೆ ಗ್ರಾಮಗಳಿಗೆ ಪ್ರವಾಹ ಸ್ಥಿತಿ ಉಂಟಾಗಲಿದ್ದು, ಆಯಾ ಸ್ಥಳಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಲು ತಾಲೂಕು ಆಡಳಿತ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನೈಕೊಡಿ ಮಾಹಿತಿ ನೀಡಿದ್ದಾರೆ.