

ಮೈಸೂರು: ತಿ.ನರಸೀಪುರ ತಾಲೂಕಿನ ಮೂಗೂರು ಹೋಬಳಿ ಹ್ಯಾಕನೂರು ಗ್ರಾಮದಲ್ಲಿ ಭೀತಿ ಮೂಡಿಸಿದ್ದ 3-4 ವರ್ಷ ವಯಸ್ಸಿನ ಹೆಣ್ಣು ಚಿರತೆ ಗುರುವಾರ ಸೆರೆಯಾಗಿದೆ.
ಗ್ರಾಮದಲ್ಲಿ ಕಳೆದ 20 ದಿನಗಳಿಂದ ಚಿರತೆ ಹಾವಳಿ ಇತ್ತು. ಹಲವು ಜಾನುವಾರುಗಳನ್ನು ಕೊಂದು ತಿಂದಿತ್ತು. ಜಮೀನುಗಳಲ್ಲಿ ರೈತರು ಕೆಲಸ ಮಾಡುವ ವೇಳೆ ನೇರವಾಗಿ ನೋಡಿದ್ದರು.
ಚಿರತೆ ಹಾವಳಿಯ ಕುರಿತು ಸಾರ್ವಜನಿಕರಿಂದ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಹ್ಯಾಕನೂರು ಗ್ರಾಮದ ಜಮೀನಿನಲ್ಲಿ ಡಿ.20ರಂದು ಬೋನಿರಿಸಲಾಗಿತ್ತು.
ಗುರುವಾರ ಬೆಳಗ್ಗೆ ಚಿರತೆ ಸೆರೆಯಾಗಿದೆ. ಪಶು ವೈದ್ಯಾಧಿಕಾರಿಗಳು ಪರಿಶೀಲಿಸಿದ್ದು, ಆರೋಗ್ಯವಾಗಿದೆ. ಚಿರತೆಗೆ ಮೈಕ್ರೋಚಿಪ್ ಅಳವಡಿಸಲಾಗಿದ್ದು, ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್.ಬಸವರಾಜು ತಿಳಿಸಿದ್ದಾರೆ.