

ಚಿತ್ರದುರ್ಗ: ಆಗಸದಲ್ಲಿ ಮೋಡಗಳೆಲ್ಲ ಒಂದಾಗಿ ಮಳೆ ಸುರಿಯುವ ಹಾಗೆಯೇ, ಕೋಟೆನಗರಿಯ ವೃತ್ತವೊಂದರಲ್ಲಿ ಹೋಳಿಗೆಗಳೆಲ್ಲ ಕೂಡಿ ಭಕ್ತಿಯ ಸಿಂಚನ ಹರಿಸಿತು. ಜಾತಿ-ಭೇದ ಮರೆತು ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದಕ್ಕೆ ಹಬ್ಬವೊಂದು ಸಾಕ್ಷಿಯಾಯಿತು…
ಕರುವಿನಕಟ್ಟೆ ವೃತ್ತದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಮಂಗಳವಾರ ಅಲಂಕೃತಗೊಂಡು ಕಂಗೊಳಿಸಿದ ಶಕ್ತಿದೇವತೆ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿ ಮುಂಭಾಗದಲ್ಲಿ ಭಕ್ತರು ಶ್ರದ್ಧಾ-ಭಕ್ತಿಯಿಂದ ಹೋಳಿಗೆ ಅಮ್ಮ ಪೂಜೆ ನೆರವೇರಿಸಿದರು.
ಜೋಗಿಮಟ್ಟಿ ರಸ್ತೆ, ಪ್ರಶಾಂತನಗರ, ದೊಡ್ಡ ಗರಡಿ, ಸಣ್ಣ ಗರಡಿ, ಕರುವಿನಕಟ್ಟೆ ವೃತ್ತ, ದೊಡ್ಡಪೇಟೆ, ಚಿಕ್ಕಪೇಟೆ, ಬುದ್ಧನಗರ, ಜಿಲ್ಲಾ ಕ್ರೀಡಾಂಗಣ ರಸ್ತೆ, ಕಬೀರಾನಂದ ಆಶ್ರಮ ಮತ್ತಿತರ ಬಡಾವಣೆ ನಾಗರಿಕರು ಹೋಳಿಗೆ ಅಮ್ಮನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಈ ಪೂಜೆ ಅತ್ಯಂತ ವಿಶಿಷ್ಟವಾಗಿದ್ದು, ಮನೆಯಲ್ಲಿ ಮಹಿಳೆಯರು, ಯುವತಿಯರು ಉಪವಾಸ ವ್ರತ ಆಚರಿಸಿದರು.
ನೇಮದಿಂದ ತಯಾರಿಸಿದ ಹೋಳಿಗೆ-ತುಪ್ಪ, ಅನ್ನ-ಮೊಸರು ಎಡೆಯೊಂದಿಗೆ ವೃತ್ತಕ್ಕೆ ಬೆಳಗ್ಗೆಯಿಂದ ಸಂಜೆಯವರೆಗೂ ಸಾವಿರಾರು ಮಂದಿ ಬಂದು ಸಮರ್ಪಿಸಿದರು. ಕಾರಣ ಇಡೀ ವೃತ್ತದಲ್ಲಿ ಎಲ್ಲಿ ನೋಡಿದರಲ್ಲಿ ಹೋಳಿಗೆಗಳೇ ಕಂಡು ಬಂದವು.
ಅಡಕೆ ತಟ್ಟೆ ಅಥವಾ ಊಟದ ಎಲೆಗಳಲ್ಲಿ ಎಡೆಯ ಜೊತೆ ಮಣ್ಣಿನ ಕುಡಿಕೆಯಲ್ಲಿ ಬೇವಿನ ಸೊಪ್ಪು ಇಟ್ಟು, ಅರಿಶಿಣ, ಕುಂಕುಮ, ಬಳೆ, ತೆಂಗಿನ ಕಾಯಿ, ಬಾಳೆ ಹಣ್ಣು ಅರ್ಪಿಸಿದರು.
ವೃತ್ತದ ಸಮೀಪವಿರುವ ಏಕನಾಥೇಶ್ವರಿ ದೇವಿಯ ಪಾದದ ಗುಡಿ ಮುಂಭಾಗ ಹೋಳಿಗೆಗಳನ್ನು ಸಾಲಾಗಿ ಇಡಲಾಯಿತು. ಈ ಸುಂದರ ದೃಶ್ಯವನ್ನು ಹಲವರು ಕಣ್ತುಂಬಿಕೊಂಡರು. ಹೊಸಬರಿಗೆ ಇದು ಅತ್ಯಾಕರ್ಷಕವಾಗಿಯೂ ಕಂಡಿತು.
ಏಕನಾಥೇಶ್ವರಿ, ಅಂತರಘಟ್ಟಮ್ಮ, ಗಾಳಿ ಮಾರಮ್ಮ ದೇವತೆಗಳಿಗೆ ವಿಶೇಷ ಪೂಜೆ ನೆರವೇರಿತು. ಸಂಜೆ 6ರ ನಂತರ ತಿಪ್ಪಿನಘಟ್ಟಮ್ಮ ದೇವಿ ಜತೆಗೆ ಹೋಳಿಗೆ ಅಮ್ಮನನ್ನು ಊರಿಂದ ಹೊರಗೆ ಕರೆದೊಯ್ಯಲಾಯಿತು.
ಈ ಆಚರಣೆಯನ್ನು ಸಾಂಕ್ರಾಮಿಕ ರೋಗಗಳನ್ನು ತೊಲಗಿಸಲು ಸಾಮೂಹಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಅಮ್ಮನನ್ನು ಬೇವಿನ ಸೊಪ್ಪು ಮುಚ್ಚಿ ಸಾಗಿಸುವುದರಿಂದ ಸೋಂಕುಗಳು ಸುಲಭವಾಗಿ ಪಸರಿಸುವುದಿಲ್ಲ ಎಂಬ ಪ್ರತೀತಿ ಕೂಡ ಇದೆ.
ಬುಡಕಟ್ಟು ಸಂಸ್ಕೃತಿಯ ವಿಶೇಷಾಚರಣೆ
ಬುಡಕಟ್ಟು ಸಂಸ್ಕೃತಿ, ಶಕ್ತಿದೇವತೆಗಳ ತವರು ಎಂದೇ ಹೆಸರಾದ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿಯೊಂದು ಹಬ್ಬ, ಆಚರಣೆಗೆ ಅದರದೇ ಆದ ನಂಬಿಕೆ, ಸಂಪ್ರದಾಯ ಹಾಗೂ ಸಂಸ್ಕೃತಿ ನೆಲೆಯಿದೆ. ಅದರ ಒಂದು ಭಾಗವೇ ಹೋಳಿಗೆ ಅಮ್ಮ. ಈ ಹಬ್ಬವನ್ನು ನಿರ್ದಿಷ್ಟ ದಿನಾಂಕ ಆಚರಿಸದಿದ್ದರೂ ಕೂಡ ಆಷಾಢ ಮಾಸದ ಮಂಗಳವಾರ ಅದಕ್ಕಾಗಿ ಮೀಸಲಿಡುತ್ತಾರೆ. ಕೆಲವೊಮ್ಮೆ ಶ್ರಾವಣದ ಮೊದಲ ಮಂಗಳವಾರ ಕೂಡ ಹೋಳಿಗೆ ಅಮ್ಮ ಹಬ್ಬ ಆಚರಿಸಿರುವ ನಿದರ್ಶನಗಳಿವೆ.
ಹೋಳಿಗೆ ಅಮ್ಮ ವಿಶೇಷವೇನು?
ಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ದಡಾರ, ಸಿಡುಬು ಸೇರಿ ಸಾಂಕ್ರಾಮಿಕ ರೋಗಗಳು ಹರಡದಂತೆ, ದುಷ್ಟ ಶಕ್ತಿ ಊರೊಳಗೆ ಬಾರದಂತೆ ಹಾಗೂ ಕಾಲಕಾಲಕ್ಕೆ ಉತ್ತಮ ಮಳೆ-ಬೆಳೆ ಆಗುವುದಕ್ಕಾಗಿ ಶತಮಾನಗಳ ಹಿಂದೆ ಆರಂಭವಾದ ಆಚರಣೆಯೇ ಹೋಳಿಗೆ ಅಮ್ಮ. ಈ ಹಬ್ಬವನ್ನು ಈಗಲೂ ಹಿರಿಯರಿಂದ ಕಿರಿಯರವರೆಗೂ ಭಯ, ಭಕ್ತಿಯಿಂದ ಆಚರಿಸುತ್ತಾ ಬರಲಾಗಿದೆ ಎನ್ನುವುದು ವಿಶೇಷ.