ಹೋಳಿಗೆ ಅಮ್ಮ ನಾಡಿಗೆ ಸಮೃದ್ಧಿ ತಾರಮ್ಮ…

Holige Amma
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 34;
Published on

ಚಿತ್ರದುರ್ಗ: ಹಚ್ಚ ಹಸಿರಿನ ಗಿಡ-ಮರಗಳಿಂದ ಪ್ರಕೃತಿಯ ಸೊಬಗು ಮೈದಳೆದಂತೆ, ಆಗಸದಲ್ಲಿ ಮೋಡಗಳೆಲ್ಲ ಒಂದಾಗಿ ಮಳೆ ಸುರಿಸಿದಂತೆ, ಕೋಟೆನಗರಿಯ ವೃತ್ತವೊಂದರಲ್ಲಿ ಹೋಳಿಗೆಗಳೆಲ್ಲ ಕೂಡಿ ಭಕ್ತಿಯ ಸಿಂಚನ ಹರಿಸಿತು. ಜಾತಿ-ಬೇಧ ಮರೆತು ಒಟ್ಟಾಗಿ ಬಾಳಿದರೆ, ಭೂಮಿಯಲ್ಲೇ ಸ್ವರ್ಗ ಸುಖವಿದೆ ಎಂಬುದಕ್ಕೆ ಹಬ್ಬವೊಂದು ಸಾಕ್ಷಿಯಾಯಿತು…

ಕರುವಿನಕಟ್ಟೆ ವೃತ್ತದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಮಂಗಳವಾರ ಪುಷ್ಪಾಲಂಕೃತಗೊಂಡು ಕಂಗೊಳಿಸಿದ ಶಕ್ತಿದೇವತೆ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿಯ ಮುಂಭಾಗ ಶ್ರದ್ಧಾ-ಭಕ್ತಿಯಿಂದ ಹೋಳಿಗೆ ಅಮ್ಮ ಪೂಜೆಯನ್ನು ಭಕ್ತರು ನೆರವೇರಿಸಿದ ವೇಳೆ ಕಂಡ ದೃಶ್ಯವಿದು.

ದೊಡ್ಡಪೇಟೆ, ಚಿಕ್ಕಪೇಟೆ, ಕರುವಿನಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ, ಪ್ರಶಾಂತನಗರ, ದೊಡ್ಡಗರಡಿ, ಸಣ್ಣ ಗರಡಿ, ಬುದ್ಧನಗರ, ಜಿಲ್ಲಾ ಕ್ರೀಡಾಂಗಣ ರಸ್ತೆ, ಕಬೀರಾನಂದಾಶ್ರಮ, ಕೋಟೆ ರಸ್ತೆ, ಫಿಲ್ಟರ್ ಹೌಸ್ ಸುತ್ತಮುತ್ತಲಿನ ಪ್ರದೇಶ ಸೇರಿ ಮತ್ತಿತರ ಬಡಾವಣೆಗಳ ನಾಗರಿಕರು ಹೋಳಿಗೆ ಅಮ್ಮ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ನಾಡಿಗೆ ಸಮೃದ್ಧಿ ತಾರಮ್ಮ ಎಂದು ಬೇಡಿಕೊಂಡರು.

ಹೋಳಿಗೆ ಅಮ್ಮನ ಪೂಜೆ ಅತ್ಯಂತ ವಿಶಿಷ್ಟವಾಗಿದ್ದು, ಅದಕ್ಕಾಗಿ ಮನೆಯಲ್ಲಿ ಮಹಿಳೆಯರು, ಯುವತಿಯರು ಉಪವಾಸ ವ್ರತ ಆಚರಿಸಿದರು. ನೇಮದಿಂದ ತಯಾರಿಸಿದ ಹೋಳಿಗೆ-ತುಪ್ಪ, ಅನ್ನ-ಮೊಸರು ಎಡೆಯೊಂದಿಗೆ ವೃತ್ತಕ್ಕೆ ಬೆಳಗ್ಗೆಯಿಂದ ಸಂಜೆಯವರೆಗೂ ಸಾವಿರಾರು ಮಂದಿ ಆಗಮಿಸಿ ಸಮರ್ಪಿಸಿದ ಕಾರಣ ಇಡೀ ವೃತ್ತ ಹೋಳಿಗೆಗಳಿಂದಲೇ ಆವರಿಸಿಕೊಂಡಿತು.

ಅಡಕೆ ತಟ್ಟೆ, ಊಟದ ಎಲೆಗಳಲ್ಲಿ ಎಡೆಯ ಜೊತೆ ಮಣ್ಣಿನ ಕುಡಿಕೆಯಲ್ಲಿ ಬೇವಿನ ಸೊಪ್ಪು ಇಟ್ಟು, ಅರಿಶಿಣ, ಕುಂಕುಮ, ಬಳೆ, ತೆಂಗಿನ ಕಾಯಿ, ಬಾಳೆ ಹಣ್ಣು ಅರ್ಪಿಸುವ ಮೂಲಕ ಅಮ್ಮನ ಪೂಜೆ ನೆರವೇರಿಸಿದರು.

ವೃತ್ತದ ಸಮೀಪವಿರುವ ಏಕನಾಥೇಶ್ವರಿ ದೇವಿಯ ಪಾದದ ಗುಡಿ ಮುಂಭಾಗ ಘಮಘಮಿಸುವ ಹೋಳಿಗೆಗಳನ್ನು ಸಾಲು ಸಾಲಾಗಿ ಇಡಲಾಯಿತು. ಈ ಸುಂದರ ದೃಶ್ಯವನ್ನು ಹಲವರು ಕಣ್ತುಂಬಿಕೊಂಡರು. ಅಲ್ಲದೆ, ಹೊಸಬರಿಗೆ ಇದು ಅತ್ಯಾಕರ್ಷಕವಾಗಿಯೂ ಕಂಡಿತು.

ಏಕನಾಥೇಶ್ವರಿ, ಅಂತರಘಟ್ಟಮ್ಮ, ಗಾಳಿ ಮಾರಮ್ಮ ದೇವತೆಗಳಿಗೆ ವಿಶೇಷ ಪೂಜೆ ನೆರವೇರಿತು. ಸಂಜೆ 6ರ ನಂತರ ತಿಪ್ಪಿನಘಟ್ಟಮ್ಮ ದೇವಿ ಜೊತೆಗೆ ಹೋಳಿಗೆ ಅಮ್ಮನನ್ನು ಊರಿಂದ ಹೊರಗೆ ಕರೆದೊಯ್ಯಲಾಯಿತು.

ಯಾವುದೇ ಜಾತಿ, ಜನಾಂಗಕ್ಕೆ ಸೀಮಿತವಾಗದ ಈ ಆಚರಣೆಯನ್ನು ಸಾಂಕ್ರಾಮಿಕ ರೋಗಗಳನ್ನು ತೊಲಗಿಸಲು ಬಹಳ ಹಿಂದಿನಿಂದಲೂ ಬಹುತೇಕರು ಸಾಮೂಹಿಕವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಅಮ್ಮನನ್ನು ಬೇವಿನ ಸೊಪ್ಪು ಮುಚ್ಚಿ ಸಾಗಿಸುವುದರಿಂದ ಸೋಂಕುಗಳು ಸುಲಭವಾಗಿ ಪಸರಿಸುವುದಿಲ್ಲ ಎಂಬ ನಂಬಿಕೆ, ಪ್ರತೀತಿ ಕೂಡ ಇದೆ.

ಬುಡಕಟ್ಟು ಸಂಸ್ಕೃತಿಯ ವಿಶೇಷಾಚರಣೆ: ಶಕ್ತಿದೇವತೆಗಳ ತವರೆಂದೇ ಹೆಸರಾದ ಚಿತ್ರದುರ್ಗ ಜಿಲ್ಲೆಯಲ್ಲಿ ಬುಡಕಟ್ಟು ಸಂಸ್ಕೃತಿ ಮೇಳೈಸಿದೆ. ಇಲ್ಲಿನ ಪ್ರತಿಯೊಂದು ಹಬ್ಬ, ಆಚರಣೆಗೆ ಅದರದೇ ಆದ ನಂಬಿಕೆ, ಸಂಪ್ರದಾಯ ಹಾಗೂ ಸಂಸ್ಕೃತಿಯ ನೆಲೆಯಿದೆ. ಅದರ ಒಂದು ಭಾಗವೇ ಹೋಳಿಗೆ ಅಮ್ಮ. ಈ ಹಬ್ಬವನ್ನು ನಿರ್ದಿಷ್ಟ ದಿನಾಂಕ ಆಚರಿಸದಿದ್ದರೂ ಕೂಡ ಆಷಾಢ ಮಾಸದ ಮಂಗಳವಾರ ಅದಕ್ಕಾಗಿ ಮೀಸಲಿಡುತ್ತಾರೆ. ಕೆಲವೊಮ್ಮೆ ಶ್ರಾವಣದ ಮೊದಲ ಮಂಗಳವಾರ ಕೂಡ ಹೋಳಿಗೆ ಅಮ್ಮ ಹಬ್ಬ ಆಚರಿಸಿರುವ ನಿದರ್ಶನಗಳಿವೆ.

ಹೋಳಿಗೆ ಅಮ್ಮ ವಿಶೇಷವೇನು?

ಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ದಡಾರ, ಸಿಡುಬು ಸೇರಿ ಸಾಂಕ್ರಾಮಿಕ ರೋಗಗಳು ಹರಡದಂತೆ, ದುಷ್ಟ ಶಕ್ತಿ ಊರೊಳಗೆ ಬಾರದಂತೆ ಹಾಗೂ ಕಾಲಕಾಲಕ್ಕೆ ಉತ್ತಮ ಮಳೆ-ಬೆಳೆ ಆಗುವುದಕ್ಕಾಗಿ ಶತಮಾನಗಳ ಹಿಂದೆ ಆರಂಭವಾದ ಆಚರಣೆಯೇ ಹೋಳಿಗೆ ಅಮ್ಮ. ಈ ಹಬ್ಬವನ್ನು ಈಗಲೂ ಹಿರಿಯರಿಂದ ಕಿರಿಯರವರೆಗೂ ಭಯ, ಭಕ್ತಿಯಿಂದ ಆಚರಿಸುತ್ತ ಬರಲಾಗಿದೆ ಎನ್ನುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net