

ಹೊಸಪೇಟೆಯಲ್ಲಿ ಡಿವೈಎಫ್‌ಐ ತಾಲೂಕು ಸಮ್ಮೇಳನ
ಹೊಸಪೇಟೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಾಗ ಹೋರಾಟದ ಹಾದಿಯಲ್ಲಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ವಿಜಯನಗರ ಕ್ಷೇತ್ರದ ಜನರು ಸೂರಿಗಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಡಿವೈಎಫ್‌ಐ ಮಾಜಿ ತಾಲೂಕು ಅಧ್ಯಕ್ಷ ಎ.ಕರುಣಾನಿಧಿ ಕರೆ ನೀಡಿದರು.
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ನಿಂದ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಹೊಸಪೇಟೆ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಪಿಐ(ಎಂ) ಮುಖಂಡ ಮರಡಿ ಜಂಬಯ್ಯ ನಾಯಕ ಮಾತನಾಡಿ, ನಮ್ಮನ್ನಾಳುವ ಶಾಸಕ, ಸಚಿವರಿಗೆ ನಮ್ಮ ತೆರಿಗೆ ಹಣದಲ್ಲೇ ಲಕ್ಷಾಂತರ ರೂ. ವೇತನ ನೀಡಲಾಗುತ್ತಿದೆ. ಆದರೆ, ಚುನಾಯಿತ ಪ್ರತಿನಿಧಿಗಳು ನಮ್ಮ ಪರವಾಗಿ ಕೆಲಸ ಮಾಡುತ್ತಿಲ್ಲ. ಕಳೆದ ೧೫ ವರ್ಷಗಳ ಕಾಲ ವಿಜಯನಗರ ಕ್ಷೇತ್ರದ ಶಾಸಕರಾಗಿದ್ದ ಆನಂದ ಸಿಂಗ್ ಬಡವರ ಗೌರವಯುತ ಬದುಕಿಗೆ ಅಗತ್ಯವಿರುವ ನಿವೇಶನ ಮತ್ತು ಮನೆ ಒದಗಿಸಿಲ್ಲ. ಶಿಕ್ಷಣ, ಉದ್ಯೋಗ ಸೃಷ್ಟಿಗೆ ಶ್ರಮಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ನೂತನ ವಿಜಯನಗರ ಜಿಲ್ಲೆಯಾದ ಬಳಿಕ ಇಲ್ಲಿನ ನವೇಶನಗಳ ಬೆಲೆ ಗಗನಮುಖಿಯಾಗಿವೆ. ೩೦*೪೦ ಅಡಿ ನಿವೇಶನ ೪೦ ಲಕ್ಷ ರೂ. ಬಾಳುತ್ತಿದ್ದು, ಬಡವರಿಗೆ ನಿಲುಕದ ವಿಷಯವಾಗಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ನಿತ್ಯ ಜೀವನ ಸಾಗಿಸುವುದೂ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಬಡವರಿಗಾಗಿ ಪ್ರತಿಪರ ಸಂಘಟನೆಗಳು ಗುರುತಿಸಿದ್ದ ಸರ್ಕಾರಿ ಜಮೀನನ್ನು ಸಕ್ಕರೆ ಕಾರ್ಖಾನೆಗಾಗಿ ಶ್ರೀಮಂತರಿಗೆ ಧಾರೆ ಎರೆದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ೧೯೯೧ರ ಮಾದರಿಯಲ್ಲಿ `ಸರ್ಕಾರಿ ಭೂಮಿ ನಮ್ಮ ಹಕ್ಕು' ಎಂಬ ಘೋಷವಾಕ್ಯದೊಂದಿಗೆ ಹೋರಾಟಕ್ಕೆ ಕೈಜೋಡಿಸಬೇಕು. ಜಂಬುನಾಥ ಹಳ್ಳಿಯ ಸರ್ಕಾರಿ ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡುವವರಿಗೆ ನಿರಂತರ ಹೋರಾಟ ನಡೆಸಬೇಕು. ಈ ಕುರಿತು ಶೀಘ್ರವೇ ಹೋರಾಟದ ರೂಪರೇಷಗಳನ್ನು ಸಿದ್ಧಗೊಳಿಸಲಾಗುವುದು ಎಂದು ವಿವರಿಸಿದರು.
ಸಿಪಿಐ(ಎಂ) ಮುಖಂಡ ಮರಡಿ ಜಂಬಯ್ಯ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ, ಜಿಲ್ಲಾಧ್ಯಕ್ಷ ವಿ.ಸ್ವಾಮಿ ವೇದಿಕೆಯಲ್ಲಿದ್ದರು.