

ಪಾಂಡವಪುರ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಲು ನಡೆಸುತ್ತಿರುವ ಹೋರಾಟದ ಸ್ವರೂಪ ಬದಲಾಗಬೇಕಿದೆ. ಚಳವಳಿಯ ಭಾಗವಾಗಿ ಮಂಡ್ಯ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಆವರಣದಲ್ಲಿ 30 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಐಸೋಲೇಷನ್ ಹಾಗೂ ಹೆಚ್ಚುವರಿ ಕೊಠಡಿ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಾಧಿಕಾರದಿಂದ ಇಂತಹ ಒಂದು ತೀರ್ಪು ಬರುತ್ತದೆ ಎಂದು ಭಾವಿಸಿರಲಿಲ್ಲ. ಇದು ನಮ್ಮೆಲ್ಲರ ದುರದೃಷ್ಟ. ರಾಜ್ಯದ ರೈತರ ಹಿತಕ್ಕಾಗಿ ಹಾಗೂ ಕುಡಿಯುವ ನೀರು ಉಳಿಸಿಕೊಳ್ಳಲು ದೊಡ್ಡ ಮಟ್ಟದ ಹೋರಾಟ ರೂಪಿಸಬೇಕಾದ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈಗ ನಡೆಸುತ್ತಿರುವ ಹೋರಾಟಗಳು ಪರಿಣಾಮಕಾರಿಯಾಗಿಲ್ಲ. ಪ್ರತಿಭಟನೆಗಳನ್ನು ಕೈಬಿಟ್ಟು ಹೋರಾಟದ ಸ್ವರೂಪ ಬದಲಿಸಬೇಕಿದೆ. ಅನಿವಾರ್ಯ ಬಂದರೆ ಪ್ರಾಂತ್ಯವಾರು ಬಂದ್‌ಗೆ ಕರೆ ಕೊಡಬೇಕಾಗುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿಗೆ ನೀರು ಹರಿಸಬಾರದೆಂಬ ಮನಸ್ಥಿತಿಯಲ್ಲಿದ್ದಾರೆ. ಆದರೆ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಸಂಗ್ರಹವಿರುವ ನೀರಿನ ಮಟ್ಟ ಮತ್ತು ವಸ್ತುಸ್ಥಿತಿಯನ್ನು ಪ್ರಾಧಿಕಾರದ ಮುಂದೆ ಮಂಡಿಸಲು ನಾವು ವಿಫಲರಾಗಿದ್ದೇವೋ ಅಥವಾ ಪ್ರಾಧಿಕಾರ ಯಾವ ಆಧಾರದ ಮೇಲೆ ಮತ್ತೆ ನೀರು ಹರಿಸಲು ಸೂಚಿಸಿದೆ ಎಂಬುದು ಗೊತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರು ಬೆಂಗಳೂರು, ಮೈಸೂರು ಸೇರಿದಂತೆ ಇತರೆಡೆಗೆ ಕುಡಿಯಲು ಸಾಕಾಗುತ್ತದೆ. ಸುಪ್ರೀಂಕೋರ್ಟ್ ಕೂಡ ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದೆ ಎಂದರು.
ಅಣೆಕಟ್ಟೆಯಲ್ಲಿ ಸಂಗ್ರವಿರುವ ನೀರು ಕೇವಲ ಕುಡಿಯುವ ನೀರಿಗೆ ಬಳಸಿಕೊಳ್ಳಲು ಸಾಕಾಗುತ್ತದೆ. ಇದಕ್ಕಾಗಿಯೇ ನಾವು ಹೋರಾಟ ಮಾಡುತ್ತಿದ್ದೇವೆ. ತಮಿಳುನಾಡಿನ ಜಲಾಶಯದಲ್ಲಿ ನೀರಿನ ಸಂಗ್ರಹ ತೃಪ್ತಿಕರವಾಗಿದ್ದು, ವ್ಯವಸಾಯಕ್ಕಾಗಿ ಅವರು ನೀರು ಕೇಳುತ್ತಿದ್ದಾರೆ. ಇಷ್ಟಾದರೂ ಪ್ರಾಧಿಕಾರ ವಸ್ತುಸ್ಥಿತಿ ಅವಲೋಕಿಸದೆ ನೀರು ಹರಿಸುವಂತೆ ಆದೇಶಿಸಿರುವುದು ಸರಿಯಲ್ಲ ಎಂದು ಹೇಳಿದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಕಾರ್ಯದರ್ಶಿ ಕೆನ್ನಾಳು ವಿಜಯಕುಮಾರ್, ಮುಖಂಡರಾದ ಚಿಕ್ಕಾಡೆ ವಿಜಯಕುಮಾರ್, ಹಾರೋಹಳ್ಳಿ ಲಕ್ಷ್ಮೇಗೌಡ, ಎಪಿಎಂಸಿ ಸ್ವಾಮೀಗೌಡ, ಪುರಸಭೆ ಮಾಜಿ ಅಧ್ಯಕ್ಷ ಹುಚ್ಚೇಗೌಡ ಇದ್ದರು.