ಹೋರಾಟದ ಮೂಲಕ ದೌರ್ಜನ್ಯ ಎದುರಿಸಿ ; ಸಂಸದ ವಿ. ಶ್ರೀನಿವಾಸಪ್ರಸಾದ್ ಸಲಹೆ : ಮಾಂಬಳ್ಳಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ

20 yelandur 02
Published on

ಚಾಮರಾಜನಗರ : ಹೋರಾಟದ ಮೂಲಕವೇ ದೌರ್ಜನ್ಯಗಳನ್ನು ಎದುರಿಸಬೇಕು ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಹೇಳಿದರು.
ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಸೋಮವಾರ ಜೈಭೀಮ್ ಅಂಬೇಡ್ಕರ್ ಸಮುದಾಯ ಭವನವನ್ನು ಶಾಸಕ ಎನ್. ಮಹೇಶ್ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಪಕ್ಷಾತೀತ ನಾಯಕರು. ಅವರ ಮೂಲಮಂತ್ರವನ್ನು ಕೆಲವರು ಮರೆತಿದ್ದಾರೆ. ನಮ್ಮ ಮೇಲಿನ ದೌರ್ಜನ್ಯ ಎದುರಿಸಲು ಹೋರಾಟದ ಮೂಲಕವೇ ಉತ್ತರಿಸುವ ಛಾತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಇದು ಕೇವಲ ಇಟ್ಟಿಗೆ, ಗಾರೆಗಳಿಂದ ಕಟ್ಟಿದ ಭವನವಲ್ಲ. ಇದು ಅಂಬೇಡ್ಕರ್ ತತ್ವ, ಸಿದ್ಧಾಂತಗಳ ಮೇಲೆ ನಿಂತಿರುವ ಸೌಧವಾಗಿದೆ. ಇಂತಹ ಭವನಗಳು ನಮಗೆ ಸ್ಫೂರ್ತಿ ತುಂಬವ ತಾಣಗಳಾಗಿ ಮಾರ್ಪಡಬೇಕು ಎಂದರು.
ಅಂಬೇಡ್ಕರ್ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಅಗತ್ಯ ನನಗೆ ಇಲ್ಲ. ಇದು ಇತರರೂ ಅರಿಯಬೇಕು. ನಮ್ಮ ಪರವಾಗಿ ಮಾತನಾಡುವ ಗಟ್ಟಿ ಧ್ವನಿ ನಮ್ಮದಾಗಬೇಕು ಎಂದರು. ಮುಂಬರುವ ಚುನಾವಣೆಯಲ್ಲಿ ಸೋಮಾರಿಗಳನ್ನು ದೂರವಿಡಬೇಕು ಎಂದು ಅವರು ಸಲಹೆ ನೀಡಿದರು.

ಇನ್ನಷ್ಟು ಅಭಿವೃದ್ಧಿ : ಶಾಸಕ ಎನ್. ಮಹೇಶ್ ಮಾತನಾಡಿ, ಈ ಸಮುದಾಯ ಭವನಕ್ಕೆ 155 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಮಾಜಿ ಸಂಸದರಾದ ಧ್ರುವನಾರಾಯಣ, ಶಿವಣ್ಣ, ಶಾಸಕರಾಗಿದ್ದ ಜಯಣ್ಣ ಅನುದಾನ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದಲೂ ಅನುದಾನ ನೀಡಲಾಗಿದೆ. ಇದಕ್ಕೆ ಮುಂಬರುವ ದಿನಗಳಲ್ಲಿ ಸುತ್ತುಗೋಡೆ, ಸೋಲಾರ್, ಶೌಚಗೃಹ, ರೂಫಿಂಗ್ ಮತ್ತಿತರ ಕಾಮಗಾರಿಗಳನ್ನು ನಿರ್ವಹಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ. ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ಕೇಶವಮೂರ್ತಿ, ಜೆಇ ನಂದೀಶ್‌ಕುಮಾರ್, ಗ್ರಾಪಂ ಸದಸ್ಯರಾದ ಲಕ್ಷ್ಮೀ ರಾಮು, ಮಲ್ಲೇಶ್, ಪಪಂ ನಾಮನಿರ್ದೇಶಿತ ಸದಸ್ಯರಾದ ಮಹೇಶ್, ರಘು, ಕೊಳ್ಳೇಗಾಲ ನಗರಸಭಾ ಸದಸ್ಯರಾದ ರಾಮಕೃಷ್ಣ, ನಾಗಸುಂದ್ರಮ್ಮ, ಪವಿತ್ರಾ ರಮೇಶ್, ಸೋಮಣ್ಣ, ಮುಖಂಡ ಮಾಂಬಳ್ಳಿ ನಂಜುಂಡಸ್ವಾಮಿ, ಮಧುಚಂದ್ರ, ಪ್ರಕಾಶ್, ಮಾಂಬಳ್ಳಿ ಶಿವಕುಮಾರ್, ಚಾಮುಲ್ ಅಧ್ಯಕ್ಷ ನಾಗೇಂದ್ರ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net