

ಬಳ್ಳಾರಿ : ಅಂದಿನ ಮಹಾನೀಯರ ತ್ಯಾಗ, ಬಲಿದಾನ, ಹೋರಾಟದ ಪರಿಶ್ರಮದಿಂದ ಇಂದು ಸುಸ್ಥಿರ ಬದುಕು ಕಟ್ಟಿಕೊಂಡು ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಆವರಣದಲ್ಲಿ ಜಿಲ್ಲಾಡಳಿತ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭಾರತ ದೇಶಕ್ಕೆ 1947ರಲ್ಲಿ ಸ್ವಾತಂತ್ರೃ ದೊರೆತರು, ಕಲ್ಯಾಣ ಭಾಗದ ಜನರಿಗೆ 13 ತಿಂಗಳ ಬಳಿಕ ಸ್ವಾತಂತ್ರೃ ದೊರೆಯಿತು. ದೇಶ ಸ್ವಾತಂತ್ರೃ ಪಡೆದ ನಂತರವೂ ಹೈದರಬಾದ್ ನಿಜಾಮ ಮೀರ್ ಉಸ್ಮಾನ್ ಅಲಿಯ ಆಡಳಿತಕ್ಕೆ ಒಳಪಟ್ಟಿದ್ದ ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಶಿಕ್ಷಣ, ಉದ್ಯೋಗ, ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ತಟಸ್ಥವಾದವು. ಕಲ್ಯಾಣ ಕರ್ನಾಟಕ ಘೋಷಣೆಯಾದ ಸಂದರ್ಭದಲ್ಲಿ ಜಿಲ್ಲೆ ಸ್ಥಾನ ವಂಚಿತವಾಗಿತ್ತು. ಇಲ್ಲಿನ ಸ್ಥಳೀಯ ಹೋರಾಟಗಾರರ ಶ್ರಮದಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸೇರ್ಪಡೆಯಾದ ನಂತರ ಹಲವಾರು ಅಭಿವೃದ್ಧಿ ಪ್ರಯೋಜನಗಳನ್ನು ಪಡೆದುಕೊಂಡಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿನ ಜನರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿ ಕಾಯ್ದೆ 371(ಜೆ) ಜಾರಿಗೊಳಿಸಲಾಗಿದ್ದು, ಜನರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ವಿವಿಧ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೆಚ್ಚಿನ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ಸಂಸದ ಈ. ತುಕಾರಾಮ್ ಮಾತನಾಡಿ, ಅಂದಿನ ದಿನಮಾನಗಳಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ದಿಯಲ್ಲಿ ಹಿಂದುಳಿದ, ಅತಿ ಹಿಂದುಳಿದ, ಅತ್ಯಂತ ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಸಂಪೂರ್ಣ ಅಭಿವೃದ್ಧಿ ಕರ್ನಾಟಕ ಮಾಡುವ ಪಣತೊಟ್ಟಿದ್ದರು. ಅದರಲ್ಲಿ 175 ತಾಲೂಕುಗಳಲ್ಲಿ 114 ತಾಲೂಕು ಹಿಂದುಳಿದ ವರದಿಯಾದರೆ, ಕಲ್ಯಾಣ ಕರ್ನಾಟಕ ಭಾಗದ 39 ತಾಲೂಕುಗಳಲ್ಲಿ 21 ತಾಲೂಕುಗಳು ಅತ್ಯಂತ ಹಿಂದುಳಿದ ತಾಲೂಕುಗಳಿವೆ ಎಂದು ವರದಿ ನೀಡಿದ ಬೆನ್ನಲ್ಲೆ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ವಿಶೇಷ ಸ್ಥಾನಮಾನ ದೊರಕಿಸಲು ಪ್ರಯತ್ನ ಪಟ್ಟರು ಎಂದು ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ಮಾತನಾಡಿದರು. ಸರ್ದಾರ್ ವಲ್ಲಭಾಯ್ ಪಟೇಲ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ವಿವಿಧ ಕಾರ್ಯಕ್ರಮಗಳು : ಜಿಲ್ಲೆಯ ಒಂಬತ್ತು ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕಲಿಕಾ ಆಸರೆ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ 371(ಜೆ) ಕುರಿತು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಪಾಲಿಕೆ ವತಿಯಿಂದ ವಿವಿಧ ಥೀಮ್‌ಗಳುಳ್ಳ ಚಿತ್ರಪ್ರದರ್ಶನ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಬಾಕ್ಸ್ : ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಎಂಬುದು ಹಲವರಿಗೆ ತಿಳಿದಿಲ್ಲ. ಮೈದಾನದಲ್ಲಿ ಯಾವ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿತ್ತು. ವೇದಿಕೆ ಮುಂಭಾಗದ ಕೇವಲ ಕೆಲ ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಮಾಡಲಾಗಿತ್ತು. ಉಳಿದ ನೂರರು ವಿದ್ಯಾರ್ಥಿಗಳು ಕೆಳಗಡೆ ಕುಳಿತು ಭಾಷಣ ಆಲಿಸಿದರು. ಶಾಮಿಯಾನ್ ಕೂಡ ಸ್ವಲ್ಪ ಮಟ್ಟಿಗೆ ಹಾಕಿದ್ದರಿಂದ, ಹಲವರು ಬಿಸಿಲಿನಲ್ಲಿಯೇ ನಿಂತುಕೊಂಡು ಭಾಷಣ ಕೇಳಿದರು. ಕಾರ್ಯಕ್ರಮಕ್ಕೂ ಮುನ್ನ ನಗರ ಇಂದಿರಾ ವೃತ್ತದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಮೇಯರ್ ಮುಲ್ಲಂಗಿ ನಂದೀಶ್ ಸೇರಿದಂತೆ ಅಧಿಕಾರಿಗಳು ಸ್ವಚ್ಛತೆ ಅರಿವಿನ ಟೀ ಶರ್ಟ್, ಗ್ಲೌಸ್ ಹಾಗೂ ಪೊರಕೆ ಹಿಡಿದು ಸ್ವಚ್ಛತಾ ಅಭಿಯಾನ ನಡೆಸಿದರು. ನಿತ್ಯ ಗ್ಲೌಸ್ ಇಲ್ಲದೆ ದುಡಿಯುವ ಪೌರ ಕಾರ್ಮಿಕರ ಸಮಸ್ಯೆ ಬಗ್ಗೆ ಮಾತ್ರ ಆಲಿಸಿಲ್ಲ ಎಂದು ಪೌರ ಕಾರ್ಮಿಕರು ಅಳಲು ತೋಡಿಕೊಂಡರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಎಡಿಸಿ ಮಹಮ್ಮದ್ ಎನ್. ಝಬೇರ್, ಮೇಯರ್ ಮುಲ್ಲಂಗಿ ನಂದೀಶ್, ಕಾಂಗ್ರೆಸ್ ಜಿಲ್ಲಾದ್ಯಕ್ಷ ಅಲ್ಲಂ ಪ್ರಶಾಂತ ಇದ್ದರು.