

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ರೈತರು ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಜು.2ಕ್ಕೆ 3 ತಿಂಗಳು ಪೂರೈಸಲಿದೆ. ಆದರೆ ಈವರೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಭಾನುವಾರ (ಜು.3) ದೊಡ್ಡಮಟ್ಟದ ರೈತರ ಸಭೆ ಆಯೋಜಿಸಲು ಚಿಂತನೆ ನಡೆದಿದೆ. ಜತೆಗೆ ಈವರೆಗಿನ ಹೋರಾಟದ ದಿಕ್ಕು ಬದಲಿಸಲು ಹೋರಾಟಗಾರರು ಸಜ್ಜಾಗಿದ್ದಾರೆ. ಮೊದಲ ಹಂತದಲ್ಲಿ ಚನ್ನರಾಯಪಟ್ಟಣ ತಾಲೂಕಿನಲ್ಲೇ 900 ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಬಳಿಕ ಎರಡನೇ ಹಂತದಲ್ಲಿ 1,777 ಎಕರೆ ವಶಕ್ಕೆ ಪಡೆಯಲಾಗಿದೆ. ಇದೀಗ ಮೂರನೇ ಹಂತದಲ್ಲಿ 12 ಸಾವಿರ ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ಭವಿಷ್ಯದಲ್ಲಿ ಈ ಭಾಗದ ರೈತರು ಒಕ್ಕಲುತನದಿಂದ ಸಂಪೂರ್ಣವಾಗಿ ವಂಚಿತರಾಗಲಿದ್ದಾರೆ ಎಂಬುದು ಹೋರಾಟಗಾರರ ಆತಂಕವಾಗಿದೆ. ಇದುವರೆಗೂ ಶಾಂತಿಯುತ ಹೋರಾಟ ನಡೆಸುತ್ತಿದ್ದ ಅವರು, ಉಗ್ರ ಪ್ರತಿಭಟನೆಗೆ ಮುಂದಾಗುವ ಸೂಚನೆ ನೀಡಿದ್ದಾರೆ. ಕಾಲ್ನಡಿಗೆ ಜಾಥಾ: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಸೇರಿ ವಿಜಯಪುರ ಹಾಗೂ ಕುಂದಾಣ ಹೋಬಳಿಗಳಲ್ಲೂ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಇದು ರೈತರನ್ನು ಮತ್ತಷ್ಟು ಕೆರಳಿಸಿದೆ. ಹೋರಾಟದ ಕಿಚ್ಚು ಹೊತ್ತಿಕೊಳ್ಳುವ ಸೂಚನೆ ಲಭಿಸಿದೆ. ಇದಕ್ಕೆ ಪೂರಕವೆಂಬಂತೆ ಮೇ 27ರಂದು ಅರುವನಹಳ್ಳಿ, ಚಪ್ಪರದಹಳ್ಳಿ, ದೊಡ್ಡಗೊಲ್ಲಹಳ್ಳಿ, ಬೈರದೇನಹಳ್ಳಿ ಸೇರಿ ಅನೇಕ ಗ್ರಾಮದ ರೈತರು ಕುಂದಾಣ ಹೋಬಳಿಯ ಹೆದ್ದಾರಿಯಲ್ಲಿ ಕಾಲ್ನಡಿಗೆ ಜಾಥಾ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಗ್ರಾಮಗಳಲ್ಲಿ ರಾಗಿ ಸೇರಿ ತೋಟಗಾರಿಕೆ ಬೆಳೆ ಬೆಳೆಯಾಗುತ್ತಿದೆ. ಕೃಷಿಗೆ ಪೂರಕವಾದ ಲವತ್ತಾದ ಭೂಮಿಯಾಗಿದೆ. ಈ ಹಿನ್ನೆಲೆಯಲ್ಲಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದ್ದರು. ಬಂದ್ ವೇಳೆ ಹೈಡ್ರಾಮ: ಅನಿರ್ದಿ ಷ್ಟಾವಧಿ ಧರಣಿ 175 ದಿನ ಪೂರೈಸಿದಾಗ ದೇವನ ಹಳ್ಳಿಯ ಬಂದ್‌ಗೆ ಕರೆ ನೀಡಲಾಗಿತ್ತು. ಆಗ ಸರ್ಕಾರ ಬಂದ್ ಹಿಂದಿನ ದಿನ ರೈತರ ಹೆಸರಿನಲ್ಲಿ ಕೆಲವರನ್ನು ಬೆಂಗಳೂರಿಗೆ ಕರೆಸಿಕೊಂಡು ಮಾತುಕತೆಯ ನಾಟಕವಾಡಿತ್ತು. ಬಂದ್‌ಗೆ ಕರೆ ನೀಡಿರುವವರು ರೈತರೇ ಅಲ್ಲ ಎಂಬಂತೆ ಬಿಂಬಿಸಲು ಪ್ರಯತ್ನಿಸಿತ್ತು ಎಂದು ಹೋರಾಟಗಾರರು ಆರೋಪಿಸಿದರು. ಸರ್ಕಾರ ಹಿಂಬಾಗಿಲ ಮೂಲಕ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದ್ದು, ಬೇರೆ ರೀತಿಯಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವುದಾಗಿ ಹೇಳಿದರು.
ಕೆಐಎಡಿಬಿ ವಿರುದ್ಧದ ಹೋರಾಟ ಆರಂಭವಾಗಿ 3 ತಿಂಗಳು ಸಮೀಪಿಸುತ್ತಿದೆ. ಸರ್ಕಾರ ರೈತರ ಹಿತದೃಷ್ಟಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ನಮ್ಮ ಶಾಂತಿಯುತ ಹೋರಾಟ ಹತ್ತಿಕ್ಕಲು ಹಿಂಬಾಗಿಲ ಮೂಲಕ ಯತ್ನಿಸುತ್ತಿದೆ. ಆದ್ದರಿಂದ ನಮ್ಮ ಇಷ್ಟು ದಿನದ ಹೋರಾಟದ ದಿಕ್ಕು ಬದಲಿಸಿ ಸರ್ಕಾರದ ಬಿಸಿಮುಟ್ಟಿಸಲು ಚಿಂತಿಸಲಾಗಿದೆ. ಮುಂದಿನ ಭಾನುವಾರ ದೊಡ್ಡಮಟ್ಟದಲ್ಲಿ ರೈತರ ಸಭೆ ನಿಗದಿಯಾಗಿದೆ. - ಕಾರಹಳ್ಳಿ ಶ್ರೀನಿವಾಸ್ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯ