

ಕಮಲನಗರ: ತ್ಯಾಗ, ಬಲಿದಾನಗಳ ಫಲವಾಗಿ ದೊರೆತ ಸ್ವಾತಂತ್ರ ದುರುಪಯೋಗ ಮಾಡಿಕೊಳ್ಳದೇ, ಸದೃಢ ರಾಷ್ಟ ನಿರ್ಮಾಣಕ್ಕೆ ಶ್ರಮಿಸಬೇಕು. ರಜಾಕಾರರ ದೌರ್ಜನ್ಯದ ವಿರುದ್ಧ ಹೋರಾಡಿದ ಮಹಾತ್ಮರ ಜೀವನ ಯುವ ಜನಾಂಗಕ್ಕೆ ಪ್ರೇರಣೆ ಆಗಲಿ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ.ಎಸ್.ಎನ್.ಶಿವಣಕರ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಭಾನುವಾರ ಹಮ್ಮಿಕೊಂಡ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮಾತನಾಡಿ, ಹೈದರಾಬಾದ್ ನಿಜಾಂ ಆಳರಸರ ಆಳ್ವಿಕೆಗೆ ಒಳಪಟ್ಟ ಈ ಪ್ರದೇಶ ಸ್ವಾತಂತ್ರದ ೧೩ ತಿಂಗಳ ನಂತರ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನವಾಯಿತು. ಅಂದಿನ ಗೃಹಮಂತ್ರಿ ಸರ್ದಾರ್ ಪಟೇಲ್‌ರ ಮುತ್ಸದಿ ನಾಯಕತ್ವದ ಪ್ರತಿಫಲ ಇದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶಿಲಾ ಸಜ್ಜನಶೆಟ್ಟಿ ಮಾತನಾಡಿದರು. ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಧ್ವಜಾರೋಹಣ ನೆರವೇರಿಸಿದರು. ತಾಪಂ ಇಒ ಮಾಣಿಕರಾವ ಪಾಟೀಲ್, ಉಪ ತಹಸೀಲ್ದಾರ್ ಗೋಪಾಲಕೃಷ್ಣ, ತಾಪಂ ಎಡಿ ಶಿವಕುಮಾರ ಘಾಟೆ, ಹಣಮಂತರಾಯ ಕೌಟಗೆ, ಪಿಎಸ್‌ಐ ಚಂದ್ರಶೇಖರ ನಿರ್ಣೆ, ಅಶ್ವಿನ ಪಾಟೀಲ್, ರಾಜಕುಮಾರ ಪಾಟೀಲ್, ನೀಲಕಂಠರಾವ ಕಾಂಬಳೆ, ರಂಗರಾವ ಜಾಧವ್, ಶಿವಾನಂದ ವಡ್ಡೆ, ಪಿಡಿಒ ರಾಜಕುಮಾರ ತಂಬಾಕೆ, ಉತ್ತಮರಾವ ಮಾನೆ ಇತರರಿದ್ದರು.