ಚಾಮರಾಜನಗರ: ಸಂಪೂರ್ಣವಾಗಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ನಿರಂತರವಾಗಿ ಹೋರಾಟ ಮಾಡುತ್ತಿರುವ ಬಿ.ಆರ್.ಭಾಸ್ಕರ್‌ಪ್ರಸಾದ್ ಅವರನ್ನು ಸರ್ಕಾರ ಬಂಧಿಸಿರುವುದು ಖಂಡನೀಯ ಎಂದು ಕರ್ನಾಟಕ ಸಾಮಾಜಿಕ ನ್ಯಾಯ ಪರ ವಕೀಲರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟು ರಾಜೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಒಂದು ಕಡೆ ಒಳ ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಹೇಳಿ, ಮತ್ತೊಮ್ಮೆ ಕಡೆ ಒಳ ಮೀಸಲಾತಿ ಪರವಾಗಿ ಹೋರಾಟ ಮಾಡಿದವರನ್ನು ಬಂಧಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಒಳ ಮೀಸಲಾತಿ ಜಾರಿಗೆ ತರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ಸಂಪೂರ್ಣವಾಗಿ ಒಳಮೀಸಲಾತಿಯನ್ನು ಜಾರಿ ಮಾಡಬೇಕು. ಸರ್ಕಾರ ಒಳಮೀಸಲಾತಿಯಲ್ಲಿ ಪ್ರವರ್ಗ ಎ,ಬಿ,ಸಿ ಎಂದು ವರ್ಗೀಕರಣ ಮಾಡಿದೆ. ಆದರೆ ನೇರ ನೇಮಕಾತಿ, ಬಡ್ತಿ, ಬ್ಯಾಕ್‌ಲಾಗ್, ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಅಧಿಸೂಚನೆ ಹೊರಡಿಸಿಲ್ಲ. ಗ್ರಾಮೀಣ ಪ್ರದೇಶದಿಂದ ಜಿಲ್ಲಾಮಟ್ಟದವರೆಗೆ ಹಾಗೂ ಪಟ್ಟಣದಿಂದ ಬೆಂಗಳೂರು ಮಹಾನಗರ ಪಾಲಿಕೆವರೆಗೂ, ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಒಳ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಎಸ್‌ಇಪಿ ಮತ್ತು ಟಿಎಸ್‌ಪಿ ಹಣವನ್ನು ಲೆಕ್ಕವಿಲ್ಲದೆ ಬಳಸುತ್ತಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗಿಗಳು ಬೀದಿಗೆ ಬಂದಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ್ಟ 2.84 ಲಕ್ಷ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ನಿರ್ಲಕ್ಷ್ಯ ಧೋರಣೆಯನ್ನು ತೋರಿದೆ ಎಂದು ಆರೋಪಿಸಿದರು. ಗೋಷ್ಠಿ ವಕೀಲರಾದ ಸಿದ್ದೇಶ್, ಮಲ್ಲು, ಶಿವಮಲ್ಲು, ವಸಂತ ಕುಮಾರ್, ಬಸವರಾಜು, ಸಿ.ಮಧು ಹಾಜರಿದ್ದರು.