ಹೋರಾಟಗಳನ್ನು ಹೆಚ್ಚು ಬಲಪಡಿಸಬೇಕಿದೆ:ಕೆ.ಎಸ್.ಅಶ್ವಿನಿ

ಹೋರಾಟಗಳನ್ನು ಹೆಚ್ಚು ಬಲಪಡಿಸಬೇಕಿದೆ:ಕೆ.ಎಸ್.ಅಶ್ವಿನಿ
Published on

ಹಾಸನ: ಪ್ರಸ್ತುತ ಶಿಕ್ಷಣದ ವ್ಯಾಪಾರೀಕರಣ ವಿರುದ್ಧ ಬಲಿಷ್ಟ ಹೋರಾಟಗಳನ್ನು ಕಟ್ಟುತ್ತಾ, ಪ್ರತಿಯೊಬ್ಬರಿಗೂ ಪ್ರಜಾತಾಂತ್ರಿಕ-ವೈಜ್ಞಾನಿಕ- ಧರ್ಮ ನಿರಪೇಕ್ಷ ಸಮಾನ ಶಿಕ್ಷಣ ಖಾತ್ರಿಯಾಗಬೇಕೆಂದರೆ ವಿದ್ಯಾರ್ಥಿಗಳು ಹೆಚ್ಚು ಹೋರಾಟಗಳನ್ನು ಬಲಪಡಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಎಐಡಿಎಸ್‌ಒ ರಾಜ್ಯ ಅಧ್ಯಕ್ಷರಾದ ಕೆ.ಎಸ್. ಅಶ್ವಿನಿ ಹೇಳಿದರು.
ಹಾಸನ ಜಿಲ್ಲೆಯ ಸಾಲಗಾಮೆ ಗೇಟ್ ಬಳಿ ಎಐಡಿಎಸ್‌ಒ ನೂತನ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚುತ್ತಿರುವ ಕುಸಂಸ್ಕೃತಿ ವಿರುದ್ಧ ಪರ್ಯಾಯವಾಗಿ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆದರ್ಶ, ಮೌಲ್ಯಗಳನ್ನು ಎಲ್ಲೆಡೆ ಹರಡಬೇಕು ಎಂದು ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ರೂಪಾ ಹಾಸನ ಅವರು ಮಾತನಾಡಿ, ಅನ್ಯಾಯದ ವಿರುದ್ಧದ ಹೋರಾಟಗಳನ್ನು ನಿರಂತರವಾಗಿ ಬೆಳೆಸುವ ಜತೆಗೆ ಇನ್ನಷ್ಟು ಜ್ಞಾನ ಬೆಳೆಸಿಕೊಳ್ಳಲು ಹೆಚ್ಚೆಚ್ಚು ವೈಚಾರಿಕ ಚರ್ಚೆಗಳನ್ನು ಸಂಘಟಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ, ರಾಜ್ಯ ಖಜಾಂಚಿ ಸುಭಾಷ್, ಹಾಸನ ಜಿಲ್ಲೆಯ ಸಂಚಾಲಕಿ ಚೈತ್ರಾ, ಕಾರ್ಯಕರ್ತರಾದ ಸುಷ್ಮಾ, ಮಮತಾ, ಧನು, ಸೌಮ್ಯಾ, ಪುರುಷೋತ್ತಮ್ ಸೇರಿದಂತೆ ವಿವಿಧ ಶಾಲೆ-ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net