ಹೋರಾಟಕ್ಕೆ ತಾತ್ಕಾಲಿಕ ವಿರಾಮ

ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳು, ರೈತ ಸಂಘದ ಕಾರ್ಯಕರ್ತರು ಬುಧವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
SRP_13-01jpj
Published on

ಶ್ರೀರಂಗಪಟ್ಟಣ: ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಇನ್ಮುಂದೆ ನೀರು ಹರಿಸುವುದಿಲ್ಲ ಎಂಬ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಂಘಟನೆಯಿಂದ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ. ಸರ್ಕಾರ ತನ್ನ ಮಾತಿಗೆ ಬದ್ಧವಾಗಿರಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಹೇಳಿದರು.

ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿದರು.

ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆಯಲ್ಲಿ ಬುಧವಾರ ತೆಗೆದುಕೊಂಡ ತೀರ್ಮಾನ ಸ್ವಾಗತಾರ್ಹ. ಈಗಾಗಲೇ ತಮಿಳುನಾಡಿಗೆ ಹೆಚ್ಚುವರಿಯಾಗಿ ನೀರು ಹರಿಸಿದ ಪರಿಣಾಮ ಪ್ರಸ್ತುತ ಕನ್ನಂಬಾಡಿ ಜಲಾಶಯದಲ್ಲಿ 12 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಈಗಿರುವ ನೀರು ಕೃಷಿಗೆ ಸಾಲುವುದಿಲ್ಲ. ಜಲಾಶಯದ ವಾಸ್ತವ ಸ್ಥಿತಿಯನ್ನು ನೀರು ನಿಯಂತ್ರಣ ಸಮಿತಿ ಹಾಗೂ ಸುಪ್ರೀಂಕೋರ್ಟ್‌ಗೆ ಸಲ್ಲಿಸಿ ನಾಡಿನ ಜನರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಸುಪ್ರೀಂಕೋರ್ಟ್‌ನಲ್ಲಿ ವ್ಯತಿರಿಕ್ತ ಆದೇಶ ಬಂದರೂ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಗಟ್ಟಿತನ ಪ್ರದರ್ಶಿಸಬೇಕು. ರಾಜಕೀಯ ಲಾಭಕ್ಕಾಗಿ ಅಥವಾ ಒತ್ತಡಕ್ಕೆ ಮಣಿದು ನೀರು ಬಿಡಲು ಮುಂದಾದರೆ ಚಳವಳಿ ಉಗ್ರ ಸ್ವರೂಪ ಪಡೆಯಲಿದೆ. ಇದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾವೇರಿ ಜಲಾನಯನ ಪ್ರದೇಶದ ರೈತರು, ಸಂಘಟನೆಗಳು ಮಾತ್ರ ಹೋರಾಟ ಮಾಡುತ್ತಿವೆ. ಯಾವುದೇ ಮಠಾಧೀಶರು ಕಾವೇರಿ ವಿಚಾರವಾಗಿ ತುಟಿ ಬಿಚ್ಚುತ್ತಿಲ್ಲ. ಬೆಂಗಳೂರಿನ ನಿವಾಸಿಗಳು, ಸಾಹಿತಿಗಳು, ಸಿನಿಮಾ ನಟರು ಹೋರಾಟಗಾರರ ಬೆಂಬಲಕ್ಕೆ ನಿಲ್ಲಬೇಕು ಎಂದು ಆಗ್ರಹಿಸಿದರು.

ಸರ್ವೋದಯ ಕರ್ನಾಟಕ ಪಕ್ಷದ ಪ್ರಸನ್ನಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಪಾಂಡವಪುರ ತಾಲೂಕು ಅಧ್ಯಕ್ಷ ನಾಗಣ್ಣ, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ, ಕಾರ್ಯದರ್ಶಿ ಶಂಕರ್, ಮುಖಂಡರಾದ ಕಡತನಾಳು ಬಾಲಕೃಷ್ಣ, ಪಾಂಡು, ನಾಗೇಂದ್ರ, ಡಿ.ಎಂ.ಕೃಷ್ಣೇಗೌಡ, ಪಾ.ಲ.ರಾಮೇಗೌಡ, ಬಿ.ಎಸ್.ರಮೇಶ್, ಕೂಡಲಕುಪ್ಪೆ ಜಯರಾಮು, ದಸಂಸ ಗಂಜಾಂ ರವಿಚಂದ್ರು, ಕುಬೇರ, ಚಂದ್ರಶೇಖರ್, ಕರುನಾಡು ಹೋರಾಟ ಸಮಿತಿ ಅಧ್ಯಕ್ಷೆ ಪ್ರಿಯಾ ರಮೇಶ್, ಕರವೇ ಚಂದಗಾಲು ಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net