

ಕೋಲಾರ: ಹಿಂದುಳಿದ ವರ್ಗಗಳ 2ಎ ಮೀಸಲಾತಿ ಪಟ್ಟಿಗೆ ಇತರ ಸಮುದಾಯಗಳನ್ನು ಸೇರಿಸದಂತೆ ಕೈಗೆತ್ತಿಕೊಂಡಿರುವ ಹೋರಾಟ ತೀವ್ರಗೊಳಿಸಿ, ಸಂಪೂರ್ಣ ಸಹಕಾರ ನೀಡುವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಗಾಂಧಿವನದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಬೇಡಿಕೆಗಳ ಮನವಿಯನ್ನು ಎಸಿ ಸೋಮಶೇಖರ್‌ಗೆ ಸಲ್ಲಿಸುವ ಮುನ್ನ ಮಾತನಾಡಿದರು. ನಾನು ಇರುವವರೆಗೆ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡುತ್ತೇನೆ. ಇದರಲ್ಲಿ ರಾಜಿ ಇಲ್ಲ ಎಂದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ, ಬಡವರು, ದಲಿತ, ಶೋಷಿತರ ವಿರೋಧಿ ಸರ್ಕಾರವಿದೆ. ಹಿಂದುಳಿದ ವರ್ಗಕ್ಕೆ ಪ್ರಬಲ ಸಮುದಾಯ ಸೇರಿಸುವ ಪ್ರಯತ್ನದ ವಿರುದ್ಧ ಮನೆಯಿಂದ ಹೊರಬಂದು 31 ಜಿಲ್ಲೆಗಳಲ್ಲೂ ಒಗ್ಗಟ್ಟಿನಿಂದ ಹೋರಾಟ ತೀವ್ರಗೊಳಿಸಿ, ನನ್ನ ಸಂಪೂರ್ಣ ಬೆಂಬಲ ಇದೆ. ಸಾಧ್ಯವಾದ ಕಡೆ ಹೋರಾಟದಲ್ಲಿ ಪಾಲ್ಗೊಳ್ಳುವೆ ಎಂದರು.
ಸಮೀಕ್ಷೆ ವರದಿ ಸ್ವೀಕರಿಸಲು ಹೆದರಿಕೆ ಏಕೆ? ವಿಳಂಬ ಧೋರಣೆ ಎಲ್ಲ ಸಮಾಜಕ್ಕೂ ಮಾಡುತ್ತಿರುವ ಅಪಮಾನ. ವರದಿ ಬಗ್ಗೆ ಯಾವುದೇ ಸಂಶಯ ಬೇಡ, ಈ ಕೂಡಲೇ ವರದಿ ಸ್ವೀಕರಿಸಿ ಜನರ ಮುಂದಿಡಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಕುರುಬ, ಗೊಲ್ಲ, ಉಪ್ಪಾರ, ನೇಕಾರ, ಕುಂಚಟಿಗ, ಒಕ್ಕಲಿಗ, ಪಂಚಮಸಾಲಿ ಇನ್ನಿತರರು ಎ2, ಎಸ್‌ಟಿಗೆ ಸೇರ್ಪಡೆಗೆ ಒತ್ತಾಯಿಸುತ್ತಿರುವುದರಿಂದ ಗೊಂದಲ ಉಂಟಾಗಿದೆ. ನ್ಯಾಯಮೂರ್ತಿ ಸುಭಾಷ್ ಅಡಿ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿರುವ ಸಮಿತಿ ಅಸಂವಿಧಾನಿಕ. ಈ ಕೂಡಲೇ ರದ್ದು ಮಾಡಿ ಮೀಸಲು ನಿಗದಿಪಡಿಸಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ರಾಜ್ಯ ಸರ್ಕಾರ ರಾಜಧರ್ಮ ಪಾಲಿಸುತ್ತಿಲ್ಲ, ಪ್ರಬಲ ಸಮುದಾಯಗಳ ಅಭಿವೃದ್ಧಿಗೆ ಪರ‌್ಯಾಯ ಕಾರ್ಯಕ್ರಮ ರೂಪಿಸಲಿ, 2ಎಗೆ ಸೇರಿಸಿದರೆ ಒಬಿಸಿಗಳಿಗೆ ಅನ್ಯಾಯ ಆಗುತ್ತದೆ. ಮೀಸಲು ನೀಡಿದಲ್ಲಿ ದೊಡ್ಡ ಚಳವಳಿ, ಸರ್ಕಾರ ಬೀಳುವ ಪರಿಸ್ಥಿತಿ ನಿರ್ಮಾಣವಾದೀತು ಎಂದು ಎಚ್ಚರಿಸಿದರು.
ಕೆಪಿಸಿಸಿ ಒಬಿಸಿ ಅಧ್ಯಕ್ಷ, ಮಾಜಿ ಶಾಸಕ ಎಂಡಿ ಲಕ್ಷ್ಮೀನಾರಾಯಣ ಮಾತನಾಡಿ, 2ಎಗೆ ಸೇರಿಸುವಂತೆ 43 ಸಮುದಾಯಗಳು ಸರ್ಕಾರಕ್ಕೆ ಅರ್ಜಿ ನೀಡಿರುವಾಗ ಪಂಚಮಸಾಲಿ ಸಮಾಜದ ಕುಲಶಾಸ್ತ್ರ ಅಧ್ಯಯನ ನಡೆಸುವುದು ಯಾವ ನ್ಯಾಯ ಎಂದರು. ಶಾಸಕರಾದ ಕೆ.ಆರ್.ರಮೇಶ್‌ಕುಮಾರ್, ಕೆ,.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ಎಂ.ರೂಪಕಲಾ, ಎಮ್ಮೆಲ್ಸಿ ನಜೀರ್ ಅಹಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಚಂದ್ರಾರೆಡ್ಡಿ, ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಎಂ.ವಿ.ನರಸಿಂಹಯ್ಯ, ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ್, ಅಧ್ಯಕ್ಷ ರಾಮಚಂದ್ರಪ್ಪ, ಉಪಾಧ್ಯಕ್ಷ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ವೆಂಕಟರಾಮಯ್ಯ, ಜಿಲ್ಲಾಧ್ಯಕ್ಷ ಪ್ರಸಾದ್ ಬಾಬು, ಉಪಾಧ್ಯಕ್ಷ ಎಲ್. ಎ.ಮಂಜುನಾಥ್, ಸಂಚಾಲಕ ಬೆಳ್ಳಂಬರಿ ನಾಗರಾಜ್, ಜಂಟಿ ಕಾರ್ಯದರ್ಶಿ ಎಸ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎನ್.ಲ್ಗುಣ, ಕಲಾವಿದ ವಿಷ್ಣು, ತಂಬಿಹಳ್ಳಿ ಮುನಿಯಪ್ಪ, ಟೇಕಲ್ ಅಶೋಕ್ ಹಾಜರಿದ್ದರು.
ಈಶ್ವರಪ್ಪ ಠುಸ್ ಸಚಿವ: ಹಿಂ.ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ಅಧ್ಯಕ್ಷತೆಯಲ್ಲಿ 162 ಕೋಟಿ ರೂ. ಖುರ್ಚು ಮಾಡಿ 52 ಮಾನದಂಡ ಇಟ್ಟುಕೊಂಡು ಸಾಮಾಜಿಕ, ಶೈಕ್ಷಣಿಕ ಗಣತಿ ನಡೆಸಿದ್ದಾರೆ. ವೈಜ್ಞಾನಿಕವಾದ ವರದಿ ಸಿದ್ಧವಾಗಿದ್ದರೂ ಸ್ವೀಕರಿಸಲು ಸಿಎಂ ಯಡಿಯೂರಪ್ಪ ಜಪ್ಪಯ್ಯ ಅನ್ನುತ್ತಿಲ್ಲ. ಈಶ್ವರಪ್ಪ ಪ್ರಭಾವಿ ಸಚಿವರು, ಸಿಎಂ ಮನವೊಲಿಸುವ ಭರವಸೆ ನೀಡಿದ್ದರಾದರೂ ಸಾಧ್ಯವಾಗಿಲ್ಲ, ಈಶ್ವರಪ್ಪ ಈಗ ಠುಸ್ ಸಚಿವ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಅಜ್ಞಾತ ಸ್ಥಳದಿಂದ ಹೊರಬಂದು ಉತ್ತರಿಸಲಿ: ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ಹೊರಬಂದು ಉತ್ತರ ಕೊಡಬೇಕು. ಆಕೆ ನೀಡುವ ದೂರಿನ ನಂತರವೇ ಸಿಡಿ ಪ್ರಕರಣದ ಸತ್ಯಾಂಶ ಹೊರಬರಲು ಸಾಧ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯುವತಿ ಧೈರ್ಯದಿಂದ ದೂರು ನೀಡುವ ವಾತಾವರಣ ಸೃಷ್ಟಿಯಾಗಬೇಕು. ಸರ್ಕಾರ ಅಗತ್ಯ ರಕ್ಷಣೆ ನೀಡಬೇಕು ಎಂದರು. ಸಿಡಿ ಲೇಡಿಯ ಪಾಲಕರು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಮಾಡಿರುವ ಆರೋಪಕ್ಕೆ ಪ್ರತಿಯಾಗಿ ನನಗೂ ಸಿಡಿ ಲೇಡಿಗೂ ಯಾವುದೇ ಸಂಬಂಧವಿಲ್ಲವೆಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ, ಈ ಬಗ್ಗೆ ನಾನು ಹೇಗೆ ಹೇಳಲಿ ಎಂದು ನುಣುಚಿಕೊಂಡರು. ಯುವತಿ ನಮ್ಮ ಸಹಾಯ ಕೇಳಿದ್ದು, ತಪ್ಪೇ, ಸಮಾಜದಲ್ಲಿ ಯಾರೇ ಅಶಕ್ತರು ಸಹಾಯ ಕೇಳಿದರೂ ಸಹಾಯ ಮಾಡುತ್ತೇವೆ, ಇದರಲ್ಲಿ ಬೇರೇನೂ ಇಲ್ಲ. ಯುವತಿ ಹೊರ ಬಂದು ದೂರು ದಾಖಲಿಸುವವರೆಗೂ ಎಲ್ಲವೂ ಅಸ್ಪಷ್ಟ. ಸಂತ್ರಸ್ತೆಯ ಸಿಡಿ ಮಾ.2 ರಂದು ಬಿಡುಗಡೆಯಾಗಿದೆ. ಇದುವರೆಗೂ ಸಂತ್ರಸ್ತೆಯನ್ನು ಹುಡುಕಲು ಪೊಲೀಸರಿಂದ ಸಾಧ್ಯವಾಗದಿರುವುದು ಪೊಲೀಸರ ವೈಫಲ್ಯ ಎತ್ತಿ ತೋರಿಸುತ್ತದೆ. ನಾವು ರಮೇಶ್ ಜಾರಕಿಹೊಳಿಯನ್ನು ಬಂಧಿಸುವಂತೆ ಹೇಳಿಲ್ಲ, ಕಾನೂನು ಏನು ಹೇಳುತ್ತೋ ಸರ್ಕಾರ ಅದನ್ನು ಮಾಡಲಿ ಎಂದಿದ್ದೇವೆ ಅಷ್ಟೇ ಎಂದರು.
ಎಚ್‌ಡಿಕೆ ವಿರೋಧ: ಮೀಸಲಾತಿ ನೀಡುವ ಬಗ್ಗೆ ನಮ್ಮ ವಿರೋಧವಿಲ್ಲ. ಅರ್ಹರಿಗೆ, ಶೋಷಿತರಿಗೆ ಮೀಸಲಾತಿ ಸಿಗಲೇಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಕಾಂತರಾಜ ವರದಿಗೆ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ತಡೆ ಹಿಡಿದರು. ಅನರ್ಹರಿಗೆ ಮೀಸಲಾತಿ ಕೊಟ್ಟರೆ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ನುಡಿದರು.
ಬೆಳ್ಳಿ ಗದೆ ಕೊಡುಗೆ: ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಬೆಳ್ಳಿ ಗದೆ ನೀಡಿ ಅದ್ದೂರಿ ಸ್ವಾಗತ ಕೋರಿದರು. ಜಿಲ್ಲೆಯ ಗಡಿಭಾಗ ರಾಮಸಂದ್ರಕ್ಕೆ ಆಗಮಿಸುತ್ತಿದ್ದಂತೆ ಬೆಳ್ಳಿ ಗದೆ ಹಿಡಿದ ಸಿದ್ದರಾಮಯ್ಯ ಅಭಿಮಾನಿಗಳಿಗೆ ಫೋಸ್ ನೀಡಿದರು. ಕಾರ್ಯಕರ್ತರು ಕ್ರೇನ್ ಮೂಲಕ 30 ಅಡಿಯ ಹಾರ ಹಾಕಿ ಅಭಿಮಾನ ಪ್ರದರ್ಶಿಸಿದರು. ಶಾಸಕರಾದ ಕೆ.ಆರ್.ರಮೇಶ್‌ಕುಮಾರ್, ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ನಜೀರ್ ಅಹಮದ್, ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಅನಿಲ್‌ಕುಮಾರ್, ಸವಿತಾ ಮಂಜುನಾಥ್ ಇತರರಿದ್ದರು.
ಟೆಂಪಲ್ ರನ್: ನಗರಕ್ಕೆ ಬರುವ ಮಾರ್ಗ ಮಧ್ಯೆ ಕೊಂಡರಾಜನಹಳ್ಳಿ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕ್ಲಾಕ್ ಟವರ್ ಬಳಿಯ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ಹಾಗೂ ಗಾಂಧಿವನದಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.