

ಹಾಸನ: ಚುನಾವಣಾ ಆಯೋಗದ ಮಾರ್ಗ ಸೂಚಿಗಳಂತೆ 85 ವರ್ಷ ಮೇಲ್ಪಟ್ಟ ವೃದ್ಧರು, ಅಂಗವಿಕಲರು, ಅಂಧರುಗಳ ಮತದಾರರ ಮನೆಗಳಿಗೆ ಹೋಗಿ 12ಡಿ ಅರ್ಜಿಗಳನ್ನು ವಿತರಿಸಿ ಅಂಚೆ ಮತ ಪತ್ರ ಮೂಲಕ ಮತದಾನ ಮಾಡಿಸುವ ಅಧಿಕಾರಿಗಳು ಎಚ್ಚರದಿಂದ ಕೆಲಸ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಸಿ. ಸತ್ಯಭಾಮಾ ಸಲಹೆ ನೀಡಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ, ಜಿಲ್ಲೆಯಲ್ಲಿ ಹೋಮ್ ಓಟಿಂಗ್ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪೋಲಿಂಗ್ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ಸೂಚನೆಯಂತೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಇಚ್ಚಿಸಿದ ಮತದಾರರಿಗೆ ಅವರ ವಾಸ ಸ್ಥಳಕ್ಕೆ ಮತಗಟ್ಟೆ ಅಧಿಕಾರಿಗಳ ತಂಡ ಭೇಟಿ ನೀಡಿ,ಅಂಚೆ ಮತ ಪತ್ರ ಮೂಲಕ ಮತದಾನ ಮಾಡಿಸುವ ವಿಧಾನವನ್ನು ಹೋಮ್ ಓಟಿಂಗ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಹಾಸನ ಲೋಕಸಭಾ ಕ್ಷೇತ್ರದಲ್ಲಿ 08 ವಿಧಾನಸಭಾ ಕ್ಷೇತ್ರಗಳಿದ್ದು, ಎಲ್ಲಾ ಕ್ಷೇತ್ರಗಳಿಂದ 85ಕ್ಕಿಂತ ಹೆಚ್ಚು ವಯಸ್ಸು ಆಗಿರುವವರು 15,092, ದಿವ್ಯಾಂಗ 18,776 ಓಟು ಸೇರಿ 33,868 ಮತದಾರರಿಗೆ 12 ಡಿ ಅರ್ಜಿಗಳನ್ನು ವಿತರಿಸಲಾಗಿರುತ್ತದೆ. ಎರಡು ವರ್ಗದ ಮತದಾರರ ಪೈಕಿ 85 ವರ್ಷ ಮೇಲ್ಪಟ್ಟ 2635 ಮತ್ತು ದಿವ್ಯಾಂಗ 1373 ಸೇರಿ ಒಟ್ಟು 4009 ಮತದಾರರು ಅಂಚೆ ಮತ ಪತ್ರ ಮೂಲಕ ಮತದಾನ ಮಾಡಲು ಇಚ್ಚಿಸಿರುವುದರಿಂದ ಇವರುಗಳಿಗೆ ಅಂಚೆ ಮತ ಪತ್ರ ನೀಡಿ ಮತದಾನ ಮಾಡಿಸುವ ವಿಧಾನದಂತೆ ಮತಗಟ್ಟೆ ಅಧಿಕಾರಿಗಳ ತಂಡ ಕಾರ್ಯ ನಿರ್ವಹಿಸಲಿದೆ ಎಂದರು.
ಅಂಚೆ ಮತಪತ್ರ ಮತದಾರರ ಸಂಖ್ಯೆ ಮತ್ತು ಸೆಕ್ಟರ್ ಆಧಾರದ ಮೇಲೆ ಮಾರ್ಗ ನಕ್ಷೆಗಳನ್ನು ಸಿದ್ಧಪಡಿಸಬೇಕು. ಮತಗಟ್ಟೆಗಳಿಗೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ಮೊದಲೇ ನಿಗಧಿಪಡಿಸಿ ಅಭ್ಯರ್ಥಿಗೆ ಮೊದಲೇ ತಿಳಿಸಬೇಕು.ಮತಗಟ್ಟೆಗೆ ತೆರಳುವ ತಂಡದ ಜೊತೆ ಒಬ್ಬರೂ ಪಿ.ಆರ್.ಓ. ಪಿಓ, ಒಬ್ಬರು ಮೈಕ್ರೋ ಅಬ್ಸರ್ವರ್, ಓರ್ವ ಪೊಲೀಸ್ ಸಿಬ್ಬಂದಿ, ಒಬ್ಬ ವಿಡಿಯೋ ಗ್ರಾಫರ್ ಇರುತ್ತಾರೆ.
ಈ ತರಬೇತಿಯ ಎಲ್ಲಾ ಮಾಹಿತಿಯನ್ನು ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಪ್ಪದೇ ಪಾಲಿಸಬೇಕು. ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು ಎಂದು ಎಚ್ಚರಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಕೆ.ಟಿ.ಶಾಂತಲಾ ಸೇರಿಂದತೆ ಇತರರು ಇದ್ದರು.