ಹೋಮ ಸಂಪನ್ನ, ಮಾಲಾಧಾರಿಗಳಿಗೆ ಅನ್ನದಾನ ಆರಂಭ

Ayyappaswamy
Published on

ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆಯ ಪ್ರಸಿದ್ಧ ಅಯ್ಯಪ್ಪಸ್ವಾಮಿ ದೇಗುಲದ 24ನೇ ವರ್ಷದ ಬ್ರಹ್ಮೋತ್ಸವ ಪೂಜಾ ಕಾರ್ಯಕ್ರಮದ ಅಂಗವಾಗಿ ಆವರಣದಲ್ಲಿ ಗುರುವಾರ ನಡೆದ ಗಣ, ಲಕ್ಷ್ಮೀ ನಾರಾಯಣ ಹೃದಯ ಹೋಮ ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.

ಪ್ರತಿ ವರ್ಷದಂತೆ ಈ ಬಾರಿಯೂ ಸ್ವಾಮಿಯ ಸನ್ನಿಧಾನದಲ್ಲಿ ಮಾಲಾಧಾರಿಗಳ ಮಂಡಲ ಪೂಜೆ ವ್ರತಾಚರಣೆ ಆರಂಭೋತ್ಸವ ಆಗಿದೆ. ಇದರ ಭಾಗವಾಗಿಯೂ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನಿಂದ ಹೋಮ, ಹವನ ಆಯೋಜಿಸಿ ಶಾಸ್ತ್ರೋಕ್ತವಾಗಿ ನೆರವೇರಿಸುತ್ತ ಬರಲಾಗುತ್ತಿದೆ.

ಹೋಮ ಬೆಳಗ್ಗೆ 10ರಿಂದ ಆರಂಭವಾಗಿ ಮಧ್ಯಾಹ್ನ 1ಕ್ಕೆ ಪೂರ್ಣಾಹುತಿಯೊಂದಿಗೆ ಮುಕ್ತಾಯವಾಯಿತು. ನವಧಾನ್ಯ, ವಸ್ತ್ರ ಸೇರಿ ಪೂಜಾ ಸಾಮಗ್ರಿ ಸಮರ್ಪಿಸಲಾಯಿತು. ನೆರೆದಿದ್ದ ಸದ್ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು.

ಮೊದಲು ಮಹಾಗಣಪತಿ ಸ್ಮರಣೆಯೊಂದಿಗೆ ಹೋಮಕ್ಕೆ ಚಾಲನೆ ದೊರೆಯಿತು. ಪೂಜೆ ಆರಂಭವಾದ ನಂತರ ಲಕ್ಷ್ಮೀ ದೇವಿ, ಮಹಾವಿಷ್ಣು ಸೇರಿ ಇತರೆ ದೇವರ ಸ್ತೋತ್ರ ಪಠಿಸುತ್ತ ಹೋಮದ ನೇತೃತ್ವ ವಹಿಸಿದ್ದ ದೇಗುಲದ ಪ್ರಧಾನ ಅರ್ಚಕ ಸತೀಶ್ ಶರ್ಮಾ ಮತ್ತು ತಂಡದವರು ಗಮನ ಸೆಳೆದರು. ಕೊನೆಯಲ್ಲಿ ಸಂಕಲ್ಪ ಮಾಡಿಕೊಳ್ಳಲು ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು.

ಪೂಜಾ ಸೇವೆ ಮುಕ್ತಾಯವಾದ ನಂತರ ಹದಿನೆಂಟು ಮೆಟ್ಟಿಲುಗಳ ಒಡೆಯ ಎಂದೇ ಭಕ್ತರಿಂದ ಕರೆಸಿಕೊಳ್ಳುವ ಕೋಟೆನಗರಿಯ ಅಯ್ಯಪ್ಪನ ಅಲಂಕೃತ ಮೂರ್ತಿ ಕಣ್ತುಂಬಿಕೊಂಡ ಭಕ್ತರು ಪುಳಕಿತರಾದರು. ಜೊತೆಯಲ್ಲಿ ಭೀಮಶಂಕರ, ಗಣಪತಿ, ಸುಬ್ರಮಣ್ಯ, ಭೀಮಾಂಜನೇಯ, ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದು ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿಕೊಂಡರು.

60 ದಿನವೂ ಅನ್ನದಾನ: ವ್ರತಾಚರಣೆಗಾಗಿ ಸ್ವಾಮಿಯ ದೇಗುಲ ಶುದ್ಧೀಕರಣ ಕಾರ್ಯ ಪೂರ್ಣಗೊಂಡಿದೆ. ದೀಕ್ಷೆ ಮತ್ತು ಅನ್ನದಾನಕ್ಕೆ ಚಾಲನೆ ದೊರೆತಿದ್ದು, 60 ದಿನವೂ ಯಶಸ್ವಿಯಾಗಿ ನಡೆಯಲಿದೆ. ಮಾಲಾಧಾರಿಗಳಿಗೆ ಯಾವ ಕೊರತೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್ ತಿಳಿಸಿದ್ದಾರೆ.

ಉದ್ಯಮಿ ಟಿ.ಮಹಾಂತೇಶ್ ಅನ್ನದಾನ ಸೇವೆಗೆ ಚಾಲನೆ ನೀಡಿದರು. ಟ್ರಸ್ಟ್‌ನ ಪದಾಧಿಕಾರಿಗಳಾದ ಮಲ್ಲಿಕಾರ್ಜುನ್, ರೇಷ್ಮೆ ಮಂಜುನಾಥ್, ಚಂದ್ರಶೇಖರ್, ಸೂರಪ್ಪ, ಹಿಂದು ಮಹಾಗಣಪತಿ ಉತ್ಸವ ಸಮಿತಿ ಮಾರ್ಗದರ್ಶಿ ಬದ್ರಿನಾಥ್, ಮಾರುತಿ ಗ್ಯಾಸ್ ಏಜೆನ್ಸಿಯ ಪ್ರಭು, ಭಾರತ್ ಗ್ಯಾಸ್ ಕಾರ್ಯದರ್ಶಿ ಎಂ.ಪಿ.ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net