

ಬೆಂಗಳೂರು ಗ್ರಾಮಾಂತರ: ಗ್ರಾಮಾಂತರ ಜಿಲ್ಲೆಯಲ್ಲಿ ದಿನೇ ದಿನೆ ಲಾಕ್‌ಡೌನ್ ಹಿಡಿತ ಸಡಿಲಗೊಳ್ಳುತ್ತಿದೆ. ಮುಖ್ಯವಾಗಿ ಪಾರ್ಸೆಲ್ಗಳಿಗಷ್ಟೆ ಅವಕಾಶ ಪಡೆದಿರುವ ಹೋಟೆಲ್ಗಳಲ್ಲಿ ಸರ್ವೀಸ್ ವ್ಯವಸ್ಥೆ ನಿರಾತಂಕವಾಗಿ ನಡೆಯುತ್ತಿದೆ. ಇದೆಲ್ಲ ಸ್ಥಳೀಯ ಅಧಿಕಾರಿಗಳ ಕಣ್ಣಳತೆಯಲ್ಲೇ ನಡೆಯುತ್ತಿದ್ದು, ಕರೊನಾ ನಿಯಂತ್ರಣಕ್ಕೆ ಹೇರಿರುವ ಲಾಕ್‌ಡೌನ್ ಉದ್ದೇಶಕ್ಕೆ ಕಿಮ್ಮತ್ತಿಲ್ಲದಂತಾಗಿದೆ.
ಜಿಲ್ಲೆಯ ನಾಲ್ಕೂ ತಾಲೂಕುಗಳ ಹೋಬಳಿ ಕೇಂದ್ರಗಳಿಂದ ಹಿಡಿದು ನಗರ ಪ್ರದೇಶಗಳಲ್ಲಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಸರ್ವೀಸ್ ನೀಡುತ್ತಿರುವುದು ಕಂಡುಬರುತ್ತಿದೆ. ಪಾರ್ಸೆಲ್ ಮಾತ್ರ ಎಂದು ಹೊರಗಡೆ ನಾಮಫಲಕ ಹಾಕಿ ಒಳಗಡೆ ಗ್ರಾಹಕರಿಗೆ ಊಟ, ಉಪಾಹಾರ ಸೇವನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಕರೊನಾ ಹರಡುವ ಭೀತಿ: ಸಣ್ಣ ಹೋಟೆಲ್ಗಳ ಅಡುಗೆ ಕೋಣೆಯಲ್ಲಿ ಸರ್ವೀಸ್‌ಗೆ ಅವಕಾಶ ಕಲ್ಪಿಸುತ್ತಿದ್ದ ಕಿರಿದಾದ ಸ್ಥಳದಲ್ಲೇ ಗ್ರಾಹಕರು ಗುಂಪುಗೂಡಿ ಉಪಾಹಾರ ಸೇವಿಸುತ್ತಿದ್ದಾರೆ. ತಟ್ಟೆ, ಚಮಚಗಳನ್ನು ಅರೆಬರೆಯಾಗಿ ತೊಳೆದು ಗ್ರಾಹಕರಿಗೆ ನೀಡಲಾಗುತ್ತಿದೆ. ಹೋಟೆಲ್ಗಳಲ್ಲಿ ಶುಚಿತ್ವ ಕಂಡುಬರುತ್ತಿಲ್ಲ. ಕೆಲವು ಕಡೆಗಳಲ್ಲಿ ಅರ್ಧ ಬಾಗಿಲು ಮುಚ್ಚಿ ಸರ್ವೀಸ್ ಮಾಡಲಾಗುತ್ತಿದೆ. ಸರ್ಕಾರ ಕಲ್ಪಿಸಿರುವ ಕೆಲ ವಿನಾಯಿತಿಗಳನ್ನೇ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ.
ಅಧಿಕಾರಿಗಳ ಸಹಕಾರ: ಹೋಟೆಲ್ಗಳಲ್ಲಿ ಈ ರೀತಿಯ ಚಟುವಟಿಕೆಗೆ ಸ್ಥಳೀಯ ಅಧಿಕಾರಿಗಳೇ ಬೆಂಬಲ ನೀಡುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ಬರದಂತೆ ಇಂಥ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಮದ್ಯದಂಗಡಿಗಳಲ್ಲೂ ಮಾಮೂಲು: ಇನ್ನು ಪಾರ್ಸೆಲ್ಗಳಿಗಷ್ಟೇ ಅವಕಾಶವಿರುವ ಮದ್ಯದಂಗಡಿಗಳಲ್ಲೂ ಇಂಥದ್ದೇ ಪರಿಸ್ಥಿತಿ ಕಂಡುಬರುತ್ತಿದೆ. 10 ಗಂಟೆ ಬಳಿಕ ಹೊರಗಡೆ ಬಾಗಿಲು ಮುಚ್ಚಿ ಹಿಂಬಾಗಿಲಿನ ಮೂಲಕ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಹೀಗಾದರೆ ನಿಯಂತ್ರಣ ಹೇಗೆ: ಈಗಾಗಲೇ ಜಿಲ್ಲೆಯಲ್ಲಿ ಕರೊನಾ ಸೋಂಕಿತ ಪ್ರಕರಣ 6 ಸಾವಿರ ದಾಟಿದೆ. ಎರಡನೇ ಅಲೆ ಅಬ್ಬರಕ್ಕೆ 603 ಮಂದಿ ಬಲಿಯಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಸೋಂಕು ಮಕ್ಕಳಿಗೂ ಹರಡುತ್ತಿದ್ದು ಆತಂಕ ಸೃಷ್ಟಿಸಿದೆ. ಇಂಥ ಪರಿಸ್ಥಿತಿಯಲ್ಲಿ ನಿಯಮ ಉಲ್ಲಂಘಿಸಿ ವ್ಯವಹಾರಕ್ಕೆ ಪ್ರಾಮುಖ್ಯತೆ ಕೊಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಬೆವರು ಸುರಿಸುತ್ತಿದ್ದರೆ ಸ್ಥಳೀಯ ಅಧಿಕಾರಿಗಳು ನಿಯಮ ಉಲ್ಲಂಘಿಸುವವರಿಗೆ ಬೆಂಗಾವಲಾಗಿ ನಿಂತಿರುವುದು ಜಿಲ್ಲೆಯ ದುರದೃಷ್ಟ.
ಲಾಕ್‌ಡೌನ್ ನಿಯಮ ಉಲ್ಲಂಘನೆ ವಿರುದ್ಧ ಈಗಾಗಲೇ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಇಂಥ ಚಟುವಟಿಕೆ ಕಂಡುಬಂದರೆ ನೋಟಿಸ್ ನೀಡಿ ಬಂದ್ ಮಾಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಮುಂದೆ ಇಂಥ ಚಟುವಟಿಕೆಗೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು. ಕೆ.ಶ್ರೀನಿವಾಸ್ ಜಿಲ್ಲಾಧಿಕಾರಿ