

ಮೈಸೂರು: ಯಾವುದೇ ಹೋಟೆಲ್‌ಗಳಲ್ಲಿ ಗ್ರಾಹಕರ ಮೂಲಕ ಶೇ.5ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹಿಸುವ ಅವಕಾಶವಿದೆ ಎಂದು ಲೆಕ್ಕಪರಿಶೋಧಕ ಬಿ.ವಿ.ಮಹೇಶ್ ತಿಳಿಸಿದರು.
ಕೃಷ್ಣಮೂರ್ತಿಪುರಂನ ಹೋಟೆಲ್ ಮಾಲೀಕರ ಸಂಘದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಎಸ್‌ಟಿ ಕುರಿತು ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಯಾಟರಿಂಗ್‌ಗೆ ಕೂಡ ಶೇ.5ರಷ್ಟು ಜಿಎಸ್‌ಟಿ ಇದೆ. ಆದರೆ, ಊಟ ಬಡಿಸುವ ಹಾಲ್ ಬಾಡಿಗೆಗೆ ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕು. ಹಾಲ್ ಬಾಡಿಗೆ ಇಲ್ಲದಿದ್ದರೆ ಜಿಎಸ್‌ಟಿ ಅನ್ವಯವಾಗುವುದಿಲ್ಲ ಎಂದರು.
ರೆಸ್ಟೋರೆಂಟ್‌ಗಳು ಹಾಗೂ ಎ.ಸಿ.ವ್ಯವಸ್ಥೆ ಇಲ್ಲದ ಹೊಟೇಲ್‌ಗಳಿಗೆ ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಹೊಟೇಲ್‌ನ ಒಂದು ಕೊಠಡಿಯಲ್ಲಿ ಎ.ಸಿ.ಸೌಲಭ್ಯವಿದ್ದರೂ ಅದನ್ನು ಆನ್ ಮಾಡದಿದ್ದರೂ ತೆರಿಗೆ ಕಟ್ಟಬೇಕಾಗುತ್ತದೆ ಎಂದರು.
ಹೋಟೆಲ್ ಕಟ್ಟಡವನ್ನು ಬಾಡಿಗೆಗೆ ಪಡೆದಿದ್ದಲ್ಲಿ ಹೋಟೆಲ್ ಮಾಲೀಕರು ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕು. ಕಟ್ಟಡದ ಮಾಲೀಕ ಜಿಎಸ್‌ಟಿ ನೋಂದಣಿ ಮಾಡಿಸದಿದ್ದರೆ ಹೋಟೆಲ್‌ನವರು ಜಿಎಸ್‌ಟಿ ಪಾವತಿಸಬೇಕಾಗುತ್ತದೆ, ಇದು ನಿಮಗೆ ಹೆಚ್ಚಿನ ಹೊರೆ ಎಂದರು.
ರೆಸ್ಟೋರೆಂಟ್‌ಗಳಲ್ಲಿ ಸಿಗರೇಟ್ ಪೂರೈಕೆ ಮಾಡಿದರೆ ಸೆಸ್ ಹಾಗೂ ತೆರಿಗೆಗಳು ದುಬಾರಿಯಾಗಲಿದೆ. ಒಂದು ಸಿಗರೇಟಿನ ಮೂಲ ಬೆಲೆ 10 ರೂ.ಆದಲ್ಲಿ ಸೆಸ್ ಹಾಗೂ ತೆರಿಗೆ 11ರೂ. ಆಗಲಿದೆ. ಆದ್ದರಿಂದ ಸಿಗರೇಟ್ ಸರಬರಾಜು ಮಾಡದಿರುವುದೇ ಒಳಿತು ಎಂದರು.
ಲೆಕ್ಕಪರಿಶೋಧಕ ಪಿ.ಆರ್.ತೇಜಸ್ವಿನಿ, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಹೋಟೆಲ್ ಮಾಲೀಕರ ಧರ್ಮದತ್ತಿ ಅಧ್ಯಕ್ಷ ರವಿಶಾಸ್ತ್ರಿ, ಗೌರವ ಕಾರ್ಯದರ್ಶಿ ಆರ್.ಸುಬ್ರಮಣ್ಯ ತಂತ್ರಿ ಇನ್ನಿತರರಿದ್ದರು