

ಕಲಬುರಗಿ: ಮಹಾನಗರ ಪಾಲಿಕೆ ಕಾರ್ಯವೈಖರಿ ಇನ್ನಷ್ಟು ಚುರುಕುಗೊಳಿಸುವ ಉದ್ದೇಶದಿಂದ ಪ್ರತಿದಿನ ನಗರ ಸಂಚಾರ ಕೈಗೊಂಡು ಸ್ವಚ್ಛತೆ ಪರಿಶೀಲಿಸುತ್ತಿರುವ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಶನಿವಾರ ಬೆಳಗ್ಗೆ ವಿವಿಧೆಡೆ ಮಿಂಚಿನ ಸಂಚಾರ ನಡೆಸಿದರು.
ಸೇಡಂ ರಸ್ತೆ ಬಸವೇಶ್ವರ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶ ಹಾಗೂ ವಿದ್ಯಾನಗರ ಕಾಲನಿ ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಚ್ಛತೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಸಿಬ್ಬಂದಿಗೆ ಸೂಚಿಸಿದರು. ಜನರಿಂದ ದೂರುಗಳು ಬಂದ ಬೆನ್ನಲ್ಲೇ ಅಗತ್ಯ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.
ಹೋಟೆಲ್, ಪಾನ್ ಶಾಪ್ ಸೇರಿ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿದ ಅವರು, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚಿಸಿದರು. ಬಸವೇಶ್ವರ ಅಸ್ಪತ್ರೆ ಎದುರಿಗಿರುವ ವಿದ್ಯಾನಗರ, ಜಯನಗರಗಳಿಗೆ ತೆರಳಿ ಉದ್ಯಾನವನ ಸ್ಥಿತಿಗತಿ ಪರಿಶೀಲಿಸಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಕಸ ವಿಲೇವಾರಿ ಕುರಿತು ಮಾಹಿತಿ ಪಡೆದುಕೊಂಡರು.
ಜಯನಗರ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ವಸ್ತು ಹಾಗೂ ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಮುಖಂಡ ಶಿವರಾಮ ಅಂಡಗಿ ಮತ್ತು ಬಡಾವಣೆ ನಿವಾಸಿಗಳು ಇದ್ದರು.
ಮಾಸ್ಕ್ ಧರಿಸದೆ ವ್ಯಾಪಾರ ಮಾಡುವವರ ವಿರುದ್ಧ ಕ್ರಮ ಅಗತ್ಯ. ನಿಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಡಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಿದ್ಧಪಡಿಸಿದ ಆಹಾರ ಮುಚ್ಚಿಡಬೇಕು. ಪ್ರತಿದಿನ ಸ್ವಚ್ಛತೆ ಕಾರ್ಯ ನಡೆಯಬೇಕು.
| ರಾಹುಲ್ ಪಾಂಡ್ವೆ ಪಾಲಿಕೆ ಆಯುಕ್ತ