ಹೋಮ್ ಕ್ವಾರಂಟೈನ್​ಗೆ ವಿಶೇಷ ವ್ಯವಸ್ಥೆ

31bkl1 (1)
Published on

ಭಟ್ಕಳ: ದೇಶದಲ್ಲಿಯೆ ಭಟ್ಕಳ ಕರೊನಾ ಹಾಟ್ ಸ್ಪಾಟ್ ಎಂದು ಗುರುತಿಸಲ್ಪಡುತ್ತಿರುವಂತೆ ಜಿಲ್ಲಾಡಳಿತ ಭಟ್ಕಳವನ್ನು ಗಂಭೀರವಾಗಿ ಪರಿಗಣಿಸಿದ್ದು, ಪೀಡಿತರ ಸಂಬಂಧಿಕರಿಗೆ ಹೋಮ್ ಕ್ವಾರಂಟೈನ್​ಗಾಗಿ ಬೇರೆಯದೆ ವ್ಯವಸ್ಥೆ ಮಾಡಿದೆ.

ಭಟ್ಕಳದಲ್ಲಿ ದಿನೇ ದಿನೆ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಭಟ್ಕಳದಲ್ಲಿ ಮಾತ್ರ 8 ಕರೊನಾ ಪೀಡಿತರು ಪತ್ತೆಯಾಗಿರುವುದು ಆತಂಕಕ್ಕೆ ಈಡುಮಾಡಿದೆ. ಈಗಾಗಲೆ ಪೀಡಿತರ ಸಂಬಂಧಿಕರು, ನಿಕಟವರ್ತಿಗಳು, ಸಂಪರ್ಕಕ್ಕೆ ಬಂದವರಿಗೆ ಬೇರೆಯದೆ ವ್ಯವಸ್ಥೆ ಮಾಡಿದ್ದರೆ ಪರಿಣಾಮದ ತೀವ್ರತೆ ಕಡಿಮೆ ಇರುತ್ತಿತ್ತು ಎನ್ನುವುದು ಸಾರ್ವತ್ರಿಕ ಆರೋಪ. ಭಟ್ಕಳದಲ್ಲಿ ವಿದೇಶದಿಂದ ಬಂದವರ ಸಂಖ್ಯೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಒಂದು ಕಾರಣವಾದರೆ, ವಿದೇಶದಿಂದ ಆಗಮಿಸಿದವರು ಇತರರ ಕುರಿತು ಕಾಳಜಿ ತೆಗೆದುಕೊಳ್ಳದೆ ಇರುವುದು ಪರಿಣಾಮದ ಗಂಭೀರತೆಗೆ ಕಾರಣವಾಗಿದೆ. ಹೋಮ್ ಕ್ವಾರಂಟೈನ್​ಗೆ ಹೇಳಿದರೂ ಜನರು ಊರು ತುಂಬಾ ತಿರುಗಾಡುತ್ತ ಇತರರಲ್ಲೂ ಭಯವನ್ನುಂಟು ಮಾಡುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ತಡೆಯಲು ಆಡಳಿತ ಈ ಕ್ರಮ ಕೈಗೊಂಡಿದೆ.

ಈಗಾಗಲೆ ಕರೊನಾ ಪೀಡಿತರಲ್ಲಿ ಬಹುತೇಕರು ಒಂದೇ ಕುಟುಂಬಕ್ಕೆ ಸಂಬಂಧಪಟ್ಟವರಾಗಿದ್ದಾರೆ. ಮಂಗಳವಾರ ಭಟ್ಕಳದ ಸುಮಾರು 50 ಜನರಿಗೆ ಅಂಜುಮನ್ ಇಂಜಿನಿಯರಿಂಗ್ ಕಾಲೇಜ್​ನ ಹಾಸ್ಟೆಲ್​ನಲ್ಲಿ ಇರಿಸಲಾಗಿದ್ದು, ಅವರ ಸಂಖ್ಯೆ ಮತ್ತಷ್ಟು ಏರುವ ಸಂಭವ ಇದೆ. ಅದರಲ್ಲೆ ಇದ್ದ ವ್ಯಕ್ತಿಯೊಬ್ಬನಿಗೆ ಮಂಗಳವಾರ ಪಾಸಿಟಿವ್ ಬಂದಿದೆ ಎನ್ನಲಾಗಿದ್ದು, ಇತರರ ಕುರಿತು ತೀವ್ರ ನಿಗಾವಹಿಸಲಾಗಿದೆ. ಅಂಜುಮನ್ ಕಾಲೇಜಿನ ಹಾಸ್ಟೆಲ್​ನ ಹೊರಗೆ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಾಲೂಕಾಡಳಿತ ತಿಳಿಸಿದೆ.

ಹೊರಗಿನಿಂದ ಬಂದವರ ಮೇಲೆ ನಿಗಾ
ದೇಶಾದ್ಯಂತ ಲಾಕ್​ಡೌನ್ ಘೊಷಣೆಯಾಗುತ್ತಿದ್ದಂತೆ ಕೆಲಸದ ನಿಮಿತ್ತ ಹೊರಗೆ ಹೋದವರು ತವರಿಗೆ ಮರಳಲು ಹರಸಾಹಸಪಡುತ್ತಿದ್ದಾರೆ. ಹೆಚ್ಚಿನವರು ಈಗಾಗಲೇ ಬಂದಿದ್ದು, ಉಳಿದವರು ಜನಪ್ರತಿನಿಧಿಗಳ, ಅಧಿಕಾರಿಗಳ ಪ್ರಭಾವ ಬಳಿಸಿ ಬರುತ್ತಿದ್ದಾರೆ. ಭಟ್ಕಳದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿದಿನ ಹೀಗೆ ಹಲವರು ಬರುತ್ತಿದ್ದಾರೆ. ಇದನ್ನೂ ತಾಲೂಕಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಬೆಂಗಳೂರು ಅಥವಾ ಹೊರಗಿನಿಂದ ಬಂದವರಿಗೆ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ವಿಧಿಸುತ್ತಿದೆ. ಸೋಮವಾರ ಭಟ್ಕಳಕ್ಕೆ ಬಂದ ಸುಮಾರು 15 ಜನರನ್ನು ತಾಲೂಕಾಡಳಿತವೇ ಖುದ್ದಾಗಿ ಹೋಮ್ ಕ್ವಾರಂಟೈನ್​ನಲ್ಲಿ ಇರಿಸಿದೆ. ದೇವರಾಜ ಅರಸು ವಸತಿ ನಿಲಯವನ್ನು ಹೋಮ್ ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಿದ್ದು, ಹೋರಗಿನಿಂದ ಬಂದವರಿಗೆ ಯಾವುದೇ ಲಕ್ಷಣ ಕಂಡು ಬರದಿದ್ದರೂ ಅವರನ್ನು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net