

ಸಿದ್ದಾಪುರ: ಕರೊನಾ ವೈರಸ್ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯ. ಅದರಂತೆ ಶುಚಿತ್ವ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಎಲ್ಲ ಅಂಗಡಿ, ಹೋಟೆಲ್ ಹಾಗೂ ಬೇಕರಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಹಸೀಲ್ದಾರ್ ಮಂಜುಳಾ ಭಜಂತ್ರಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸ್ಥಳೀಯ ವಣಿಕ ಸಂಘ, ಹೋಟೆಲ್, ಬೇಕರಿ, ಸಿಹಿ ತಿಂಡಿ ಅಂಗಡಿ, ಬೇಕರಿ ಮಾಲೀಕರೊಂದಿಗೆ ಶುಕ್ರವಾರ ಸಂಜೆ ತುರ್ತು ಸಭೆ ನಡೆಸಿ ಅವರು ಮಾತನಾಡಿದರು.
ಹೊರದೇಶಗಳಿಂದ ಬಂದ ವ್ಯಕ್ತಿಗಳಿದ್ದರೆ ಮಾಹಿತಿ ನೀಡಿ. ನಮ್ಮ ದೇಶದ ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರ ಆರೋಗ್ಯವನ್ನೂ ಗಮನಿಸಿ ತಪಾಸಣೆ ಮಾಡಬೇಕಾಗುತ್ತದೆ. ಇತರೆ ಜಿಲ್ಲೆಗಳಿಂದ ಬಂದವರನ್ನೂ ಗಮನಿಸಬೇಕಾಗುತ್ತದೆ. ಹಾಲಿನ ಪ್ಯಾಕೆಟ್ಗಳನ್ನು ರಸ್ತೆ ಅಂಚಿನಲ್ಲಿ ಇಟ್ಟು ಮಾರುವುದು ಸರಿಯಲ್ಲ. ಅದನ್ನು ಕೊಠಡಿಯಲ್ಲಿ ಸಂಗ್ರಹಿಸಿಕೊಂಡು ಮಾರಾಟ ಮಾಡಿ ಎಂದು ಸೂಚಿಸಿದರು.
ಮೀನು ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಸ್ವಚ್ಛತೆಗೆ ಗಮನ ಹರಿಸಬೇಕು, ಮಾವಿನಗುಂಡಿಯಲ್ಲಿಯ ಕಸ ವಿಲೇವಾರಿ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಪಟ್ಟಣದ ಗಟಾರ್ಗಳಲ್ಲಿ ತುಂಬಿರುವ ಹೊಲಸನ್ನು ತೆಗೆಸಬೇಕು ಎಂದು ಎಂದು ಸಭೆಯಲ್ಲಿದ್ದವರು ತಿಳಿಸಿದಾಗ ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮವಹಿಸಲಾಗುವುದು ಎಂದರು.
ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೂ ಸಂಪೂರ್ಣ ವ್ಯವಹಾರಗಳನ್ನು ಬಂದ್ ಮಾಡಬೇಕು. ಮನೆಯಿಂದ ಯಾರೂ ಹೊರಬಾರದು. ಆ ಮೂಲಕ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಹಕರಿಸಿ ಎಂದು ಮನವಿ ಮಾಡಿದರು.
ಉಪ ತಹಸೀಲ್ದಾರ್ ನಾಗರಾಜ ನಾಯ್ಕಡ, ವಣಿಕ ಸಂಘದ ಅಧ್ಯಕ್ಷ ಪ್ರಕಾಶ ಹುಲೇಕಲ್, ಎನ್.ಐ. ಗೌಡ, ಬಾರ್ ಮಾಲೀಕರ ಸಂಘದ ಅಧ್ಯಕ್ಷ ಕೆ.ಜಿ. ನಾಗರಾಜ, ವಿ.ಎಂ. ಭಟ್ಟ ಕೊಳಗಿ, ಗಂಗೋತ್ರಿ ಗೋಪಾಲ ನಾಯ್ಕ, ಆರ್.ಎಸ್. ಭಟ್ಟ ಸ್ವಸ್ತಿಕ್, ವಿನಾಯಕ ಶೇಟ್, ಪಪಂ ಸದಸ್ಯ ನಂದನ ಬೋರ್ಕರ್ ಇತರರಿದ್ದರು.