ಹೊಸಹಟ್ಟಿ ಶ್ರೀಬಗ್ಗಲು ಓಬಳೇಶ್ವರ ಸ್ವಾಮಿ ಕೆಂಡರಾಧನೆ

JATA
ಕಾನಹೊಸಹಳ್ಳಿ ಸಮೀಪದ ಹೊಸಹಟ್ಟಿ ಗ್ರಾಮದ ಆರಾಧ್ಯದೈವ ಶ್ರೀ ಬಗ್ಗಲು ಓಬಳೇಶ್ವರಸ್ವಾಮಿಯು ಶನಿವಾರ ಬೆಳಗ್ಗೆ ರಂಗಯ್ಯನದುರ್ಗ ಜಲಾಶಯಕ್ಕೆ ಗಂಗೆಪೂಜೆ ಭಕ್ತರು ತೆರಳಿದರು.
Published on

ಕಾನಹೊಸಹಳ್ಳಿ: ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಸಮೀಪದ ಹೊಸಹಟ್ಟಿ ಗ್ರಾಮದ ಆರಾಧ್ಯದೈವ ಶ್ರೀ ಬಗ್ಗಲು ಓಬಳೇಶ್ವರ ಸ್ವಾಮಿಯ ಕೆಂಡರಾಧನೆ ಮಹೋತ್ಸವ ಮಾ.16ರಂದು ರಾತ್ರಿ ಜರುಗಲಿದ್ದು, ಇದಕ್ಕೆ ಗ್ರಾಮದಲ್ಲಿ ಸಕಲಸಿದ್ಧತೆ ಮಾಡಿಕೊಳ್ಳಲಾಗಿದೆ. ಬೇಡಬುಡಕಟ್ಟು ಸಾಂಪ್ರದಾಯಿಕ ಆಚರಣೆಗಳೊಂದಿಗೆ ಪ್ರಾಚೀನ ಪರಂಪರೆಗಳ ಅಧುನಿಕ ಭರಾಟೆ ನಡುವೆಯೂ ಆನಾವರಣಕ್ಕೆ ಸಾಕ್ಷಿಯಾಗಲಿದೆ.

ಇತಿಹಾಸ: ಮೇಸಬೇಡ ಸಮುದಾಯದ ಆರಾಧ್ಯದೈವ ಶ್ರೀಬಗ್ಗಲು ಓಬಳೇಶ್ವರ ಸ್ವಾಮಿಯ ಇತಿಹಾಸ ಪ್ರತೀತಿ ಮತ್ತು ನಂಬಿಕೆಯಿಂದ ಕೂಡಿದೆ. ಬೇಡಬುಡಕಟ್ಟು ಜನರು ಮೂಲತಃ ಪಶುಪಾಲಕರಾಗಿದ್ದು, ಹಲವು ಶತಮಾನಗಳ ಹಿಂದೆ ಅಂಧ್ರಪ್ರದೇಶದ ಶ್ರೀಶೈಲ ಕಡೆಯಿಂದ ತಾಲೂಕಿನ ಚಿನ್ನಹಗರಿ ಉಪನದಿಯ ಪ್ರದೇಶಕ್ಕೆ ತುರುಗಳೊಂದಿಗೆ ವಲಸೆ ಬಂದರು. ನಂತರ ಹೊಸಹಟ್ಟಿಯಲ್ಲಿ ರೊಪ್ಪ(ಹಟ್ಟಿ)ಕಟ್ಟಿಕೊಂಡು ಜೀವನ ಮಾಡಿದ್ದಾರೆ. ಜತೆಗೆ ಬಗ್ಗಲು(ಇದ್ದಿಲು) ವಾಹಿವಾಟು ಮಾಡಲೆಂದು ಸಂಗ್ರಹಣೆ ಮಾಡಿರುವಾಗ ಆಕಸ್ಮಿಕವಾಗಿ ಇದ್ದಿಲಿನ ರಾಶಿಯಲ್ಲಿ ಬೆಂಕಿಯಕೆಂಡದ ರೂಪದಲ್ಲಿ ದೇವರು ಪವಾಡಿಸಿದನೆಂಬ ಪ್ರತೀತಿ ಇಲ್ಲಿನ ಭಕ್ತರದ್ದು. ಆ ದೇವರೆ ಶ್ರೀಬಗ್ಗಲು ಓಬಳೇಶ್ವರಸ್ವಾಮಿ ಎಂಬುದು ಸ್ಥಳೀಯರ ನಂಬಿಕೆಯಾಗಿದೆ.

ಸಕಲಸಿದ್ಧತೆ : ಬೇಡಬುಡಕಟ್ಟು ಸಮುದಾಯದಲ್ಲಿ ಗುಗ್ಗರಿಹಬ್ಬವೆಂದರೆ ವಿಶೇಷವಾಗಿ ಭಯಭಕ್ತಿಯಿಂದ ಆಚರಣೆ ಮಾಡುತ್ತಾರೆ. ಆರಾಧ್ಯದೈವ ಪೂಜಾಕಾರ್ಯಗಳ ವೇಳೆ ಸಾಂಸ್ಕೃತಿಕ ಆಚರಣೆಗಳು ಮಹತ್ವದ್ದಾಗಿರುತ್ತವೆ. ಮೇಸಬೇಡರು ತಮ್ಮ ದೈವಾರಾಧನೆ ಪದ್ಧತಿಯ ಭಿನ್ನತೆಯೊಂದಿಗೆ ವಿಶಿಷ್ಠವಾಗಿರುತ್ತವೆ. ರಾಜ್ಯದಲ್ಲಿ ಬಹುಮುಖ್ಯವಾಗಿರುವ ಶ್ರೀಬಗ್ಗಲು ಓಬಳೇಶ್ವರಸ್ವಾಮಿ ಹಬ್ಬದಲ್ಲಿ ಬರಿಗೈಲಿ ನಿಗಿನಿಗಿ ಕೆಂಡವನ್ನು ಹಿಡಿದು ಬಾನೆತ್ತರಕ್ಕೆ ತೋರುವ ಪರಿ ನಿಜಕ್ಕೂ ವಿಸ್ವಯವಾಗಿರುತ್ತದೆ. ಕೆಂಡರಾಧನೆ ನಿಮಿತ್ತ ಶನಿವಾರ ಬೆಳಗ್ಗೆ ಸಂಪ್ರದಾಯದಂತೆ 20ಕಿಮೀ ದೂರದ ರಂಗಯ್ಯನದುರ್ಗ ಜಲಾಶಯಕ್ಕೆ ಸಕಲಭಕ್ತರು ಸೇರಿ ಬಿರುಬಿಸಲು ಲೆಕ್ಕಿಸದೆ ಬರಿಗಾಲಲಿ ಪಾದಯಾತ್ರೆಯೊಂದಿಗೆ ತೆರಳಿ ಗಂಗೆಪೂಜೆ ಮಾಡಿಕೊಂಡು ಬಂದರು.

ನಿಷೇಧ: ಈ ಹಬ್ಬದಲ್ಲಿ ಗ್ರಾಮದೊಳಗೆ ವಾರ ಕಾಲ ಮದ್ಯ, ಮಾಂಸ ಸೇವಿಸುವುದು, ಬೆರೆಡೆ ಸೇವಿಸಿ ಬರುವುದು ಮತ್ತು ಚರ್ಮಾತ್ಪೊನ್ನ ವಸ್ತುಗಳನ್ನು ಬಳಕೆ ಮಾಡುವುದು ನಿಷೇಧ ಮಾಡಲಾಗಿದೆ. ಕೆಂಡರಾಧನೆ ನಂತರವು ಮೂರು ದಿನಗಳವರಿಗೆ ಚಾಲ್ತಿಯಲ್ಲಿರುತ್ತದೆ. ಈ ಪದ್ಧತಿಯನ್ನು ಹಲವು ಶತಮಾನಗಳಿಂದ ಪಾಲಿಸಿಕೊಂಡು ಬರಲಾಗಿದೆ.

ಕೌತುಕ: ಇಲ್ಲಿನ ಕೆಂಡರಾಧನೆ ಕಣ್ತುಂಬಿಕೊಳ್ಳಲು ರಾಜ್ಯ, ಹೊರರಾಜ್ಯದಿಂದ ಸಾವಿರಾರು ಭಕ್ತರು ಅಗಮಿಸುವರು. ಸುತ್ತಲಿನ ಓಬಳಶೆಟ್ಟಿಹಳ್ಳಿ, ಮಡಕಲಕಟ್ಟೆ, ಹುಲಿಕುಂಟೆ, ಕುರಿಹಟ್ಟಿ, ಭೀಮಸಮುದ್ರ, ಗುಂಡುಮುಣುಗು, ಕರಡಿಹಳ್ಳಿ, ಹುರುಳಿಹಾಳ್ ಸೇರಿ ಹತ್ತಾರು ಹಳ್ಳಿಯ ಸಾವಿರಾರು ಭಕ್ತರು ಸೇರುತ್ತಾರೆ.

ಹಿಂದಿನ ಪೂರ್ವಜರು ಆಚರಿಸುವ ರೂಢಿ-ಸಾಂಪ್ರಾಯಗಳನ್ನು ಒಗ್ಗಟ್ಟಿನಿಂದ ಇಂದಿಗೂ ಪಾಲಿಸಿಕೊಂಡು ಬರುತ್ತೇವೆ. ನಿಯಮ ಮೀರಿದರೆ ಕೇಡು ಬರುತ್ತದೆ ಎಂಬ ನಂಬಿಕೆ ಇಲ್ಲಿನ ಜನಮಾನಸದಲ್ಲಿ ಉಳಿದುಕೊಂಡಿದೆ. ಗ್ರಾಮಕ್ಕೆ ಬರುವವರು ಸಹ ನಂಬಿಕೆಗಳನ್ನು ಗೌರವಿಸುತ್ತಾ ಬಂದಿದ್ದಾರೆ. ಸಾಹುಕಾರ ಹನುಮಯ್ಯ ಮುಖಂಡರ, ಹೊಸಹಟ್ಟಿ, ಕೆಂಡರಾಧನೆಯು ಮ್ಯೇಸಬೇಡ ಸಮುದಾಯದ ಆಚರಣೆಗಳಲ್ಲಿ ವಿಶೇಷವಾಗಿದ್ದು, ನೂರಾರು ವರ್ಷಗಳಿಂದ ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಸ್ವಾಮಿ ಗುಡಿಯು ಮೊದಲು ಕಾಮಸೆ ಹುಲ್ಲುನಿಂದ ನಿರ್ಮಿಸಲಾಗುತ್ತಿತ್ತು, ಈಗ ಆಧುನಿಕವಾಗಿ ಶಿಲೆಯಿಂದ ನಿರ್ಮಿಸಲಾಗಿದೆ. ಈ ಆಚರಣೆಯನ್ನು ಸರ್ವ ಜನರು ಸಮನ್ವಯದಿಂದ ಕೂಡಿ ಮಾಡುವುದು ವಿಶೇಷವಾಗಿದೆ. ನರಸಿಂಹರಾಜು ಪೂಜಾರಿ ಮನೆತನದವರು. ಹೊಸಹಟ್ಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net