

ಧಾರವಾಡ: ಕರೊನಾ ಎಂದ ಕೂಡಲೆ ಜಿಲ್ಲೆಯ ಜನತೆಗೆ ದುಃಸ್ವಪ್ನವಾಗಿ ಕಾಡುವುದು ನಗರದ ಹೊಸಯಲ್ಲಾಪುರ ಪ್ರದೇಶ. ವಿದೇಶದಿಂದ ಆಗಮಿಸಿದ್ದ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟ ನಂತರ ಇಡೀ ಧಾರವಾಡವನ್ನು ತಲ್ಲಣಗೊಳಿಸಿತ್ತು. ಕರೊನಾ ಸೋಂಕು ಪಾಸಿಟಿವ್ ಕಂಡುಬಂದಿದ್ದ ವ್ಯಕ್ತಿ ಕರೊನಾದಿಂದ ಸಂಪೂರ್ಣ ಗುಣಮುಖನಾಗಿ ಮನೆಯಲ್ಲಿದ್ದಾನೆ. ಆದರೆ, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಹೊಸಯಲ್ಲಾಪುರ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದ ಘೊಷಿಸಿ, ಮರೆತಂತಿದೆ. ನಿಷೇಧಾಜ್ಞೆಗೆ ಬೆಲೆಯೇ ಇಲ್ಲದಂತಾಗಿದೆ.
ಹೊಸಯಲ್ಲಾಪುರ ಸಂರ್ಪಸುವ ನಗರದ 9 ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಮಾಡಲಾಗಿತ್ತು. ಖುದ್ದು ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ನೇತೃತ್ವದಲ್ಲಿ ರಸ್ತೆಗಳನ್ನು ಬಂದ್ ಮಾಡಿಸಲಾಗಿತ್ತು. ಪಾಲಿಕೆ, ಪೊಲೀಸ್ ಇಲಾಖೆಗಳು ಅಗತ್ಯ ಕ್ರಮ ಕೈಗೊಂಡು ಹೊಸಯಲ್ಲಾಪುರ ಸಂರ್ಪಸುವ ರಸ್ತೆಗಳಿಗೆ ಬ್ಯಾರಿಕೇಡ್ಗಳನ್ನು ಇಟ್ಟು ಬಂದ್ ಮಾಡಿಸಿದ್ದರು. ಆದರೆ ಎರಡೇ ದಿನಗಳಲ್ಲಿ ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ನಿರ್ಬಂಧವಿಲ್ಲದೆ ಜನಸಂಚಾರ ಮುಂದುವರಿದಿದೆ.
ಹೊಸಯಲ್ಲಾಪುರ ಪ್ರದೇಶ ಹಾಗೂ ಸಂರ್ಪಸುವ ರಸ್ತೆಗಳುದ್ದಕ್ಕೂ ಅಲ್ಲಲ್ಲಿ ಅಂಗಡಿ- ಮುಂಗಟ್ಟುಗಳು ದಿನವಿಡಿ ತೆರೆದಿರುತ್ತವೆ. ಜನ ಹಾಗೂ ವಾಹನಗಳ ಸಂಚಾರ ಎಂದಿನಂತಿದ್ದು, ನಿಷೇಧಾಜ್ಞೆ ಇದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ತರಕಾರಿ, ಹಣ್ಣು ಮಾರಾಟಕ್ಕೆ ಪಾಲಿಕೆಯಿಂದ ಅನುಮತಿ ಪಡೆದು ತಳ್ಳುವ ಗಾಡಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದರೂ ಕೆಲ ಮಾರಾಟಗಾರರು ಮುಖಕ್ಕೆ ಮಾಸ್ಕ್ ಕೂಡ ಹಾಕದಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
28 ದಿನ ಕಣ್ಗಾವಲು
ಕರೊನಾ ಪಾಸಿಟಿವ್ ಕಂಡುಬರುವ ಪ್ರದೇಶಗಳು ಸೂಕ್ಷ್ಮ ಪ್ರದೇಶ. ಕರೊನಾ ದೃಢಪಟ್ಟ ವ್ಯಕ್ತಿ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನದಿಂದ 28 ದಿನಗಳವರೆಗೆ ಅದು ನಿರ್ಬಂಧಿತ ಪ್ರದೇಶವೇ. ಸರ್ಕಾರದ ಆದೇಶ ಹೀಗಿದ್ದರೂ ಧಾರವಾಡದ ಜನ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜನಸಂಚಾರ ಎಂದಿನಂತಿದ್ದರೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಂತಿದೆ.
ಹೊಸಯಲ್ಲಾಪುರ ಪ್ರದೇಶದಲ್ಲಿ ಕರೊನಾ ಪಾಸಿಟಿವ್ ಕಂಡುಬಂದ ನಂತರ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ನಗರದ 9 ಕಡೆಗಳಲ್ಲಿ ನಾಕಾಬಂದಿ ಮಾಡಲಾಗಿತ್ತು. ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಬಂದೋಬಸ್ತ್ ಬಿಗಿಗೊಳಿಸಲಾಗುವುದು.| ಮಹಮ್ಮದ್ ಜುಬೇರ್, ಉಪ ವಿಭಾಗಾಧಿಕಾರಿ