ಹೊಸಮುಖ-ಮಾಜಿ ಅಭ್ಯರ್ಥಿಗಳ ಜಂಗಿ ಕುಸ್ತಿ ; ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾವೇರಿದ ಗ್ರಾಪಂ ಚುನಾವಣಾ ಕಣ

vote 1
Published on

ಬೆಂಗಳೂರು ಗ್ರಾಮಾಂತರ : ಗ್ರಾಪಂ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಚುನಾವಣಾ ಕಣ ರಂಗೇರಿದೆ. ಈ ಬಾರಿ ಹೊಸಮುಖ ಹಾಗೂ ಹಳೇ ಅಭ್ಯರ್ಥಿಗಳ ಮಧ್ಯೆ ಜಂಗಿ ಕುಸ್ತಿ ಏರ್ಪಡುವ ಲಕ್ಷಣಗಳು ದಟ್ಟವಾಗಿದೆ. ಈ ಬಾರಿ ಕಣದಲ್ಲಿ ಬೆಂಬಲಿತ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷದ ಮುಖಂಡರು ಚಿಂತಿಸುತ್ತಿರುವ ನಡುವೆಯೇ ಈಗಾಗಲೇ ಅಧಿಕಾರ ಅನುಭವಿಸಿರುವ ಮಾಜಿಗಳೇ ಮತ್ತೊಮ್ಮೆ ಅಧಿಕಾರ ಗಾದಿ ಹಿಡಿಯಲು ತವಕಿಸುತ್ತಿದ್ದಾರೆ.

ಏತನ್ಮಧ್ಯೆ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮತ್ತಷ್ಟು ಅಭ್ಯರ್ಥಿಗಳು ಈ ಬಾರಿ ಅದೃಷ್ಟ ಪರೀಕ್ಷೆಗೆ ಹವಣಿಸುತ್ತಿದ್ದಾರೆ. ಇದರೊಂದಿಗೆ ಮೀಸಲಾತಿ ಬದಲಾವಣೆಯಿಂದ ಬೇಸತ್ತ ಕೆಲವು ಅಭ್ಯರ್ಥಿಗಳು ಪತ್ನಿ, ಮಕ್ಕಳ ಜತೆಗೆ ಸಂಬಂಧಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ತರಹೇವಾರಿ ತಂತ್ರಗಳನ್ನು ರೂಪಿಸುತ್ತಿರುವುದರಿಂದ ಕಣ ಕಾವೇರತೊಡಗಿದೆ.

ಮೂರು ಪಕ್ಷಗಳಲ್ಲೂ ಕಾವು: ಪಕ್ಷರಹಿತ ಚುನಾವಣೆ ಇದಾದರೂ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳೇ ಅದೃಷ್ಟ ಪರೀಕ್ಷೆಗಿಳಿಯುವುದರಿಂದ ಈಗಾಗಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಬಿರುಸಿನ ಚಟುವಟಿಕೆ ಗರಿಗೆದರಿವೆ. ಇದರ ನಡುವೆ ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವವರ ಸಂಖ್ಯೆಗೇನೂ ಕಡಿಮೆ ಇಲ್ಲ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. 4 ತಾಲೂಕುಗಳಿರುವ ಜಿಲ್ಲೆಯಲ್ಲಿ ನೆಲಮಂಗಲ, ದೇವನಹಳ್ಳಿ ತಾಲೂಕು ಜೆಡಿಎಸ್ ತೆಕ್ಕೆಯಲ್ಲಿದ್ದರೆ, ದೊಡ್ಡಬಳ್ಳಾಪುರ ಕಾಂಗ್ರೆಸ್ ಹಿಡಿತದಲ್ಲಿದೆ. ಹೊಸಕೋಟೆಯಲ್ಲಿ ಬಿಜೆಪಿ, ಕಾಂಗ್ರೆಸ್ ಜತೆಗೆ ಸ್ವಾಭಿಮಾನಿ ಪಕ್ಷದ ಹವಾ ಸೃಷ್ಟಿಯಾಗಿದೆ. ಆಕಾಂಕ್ಷಿಗಳು ಕಳೆದೆರಡು ತಿಂಗಳಿಂದಲೇ ಮುಖಂಡರ ಮನವೊಲಿಸುವ ತಂತ್ರದಲ್ಲಿ ಬಿಜಿಯಾಗಿದ್ದರು. ಇದೀಗ ಅಧಿಕೃತವಾಗಿ ಚುನಾವಣೆ ೋಷಣೆಯಾಗಿರುವುದರಿಂದ ಆಕಾಂಕ್ಷಿಗಳು ಆಯಾ ಪಕ್ಷದ ಮುಖಂಡರ ಮನೆಬಾಗಿಲು ತಟ್ಟುತ್ತಿದ್ದು, ಹಳ್ಳಿಕಟ್ಟೆಗಳಲ್ಲಿ ಗ್ರಾಪಂ ಚುನಾವಣೆಯ ಸದ್ದುಗದ್ದಲ ಹೆಚ್ಚತೊಡಗಿದೆ.

ಅಭಿವೃದ್ಧಿ ಭರವಸೆ : ದೇವನಹಳ್ಳಿ ಹಾಗೂ ನೆಲಮಂಗಲದಲ್ಲಿ ಜೆಡಿಎಸ್ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಬೇಟೆ ನಡೆಸುವ ಸಿದ್ಧತೆ ನಡೆದಿದೆ. ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ಕಳೆದ ಸಿದ್ದರಾಮಯ್ಯ ಸರ್ಕಾರದ ಜನಪರ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಕೇಳುವ ಸಿದ್ಧತೆ ಆರಂಭವಾಗಿದೆ. ಇದರ ಮಧ್ಯೆ ಹೊಸಕೋಟೆಯಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಸಾಧನೆಗಳು ಹಾಗೂ ಹೆಚ್ಚಿನ ಅನುದಾನದ ಭರವಸೆ ಹಿನ್ನೆಲೆಯಲ್ಲಿ ಮತಬ್ಯಾಂಕ್‌ಗೆ ಕೈಹಾಕುವ ಚಿಂತನೆ ಬಿಜೆಪಿಯದ್ದಾಗಿದ್ದರೆ, ಕಾಂಗ್ರೆಸ್ ಹಾಗೂ ಸ್ವಾಭಿಮಾನಿ ಪಕ್ಷ ಒಪ್ಪಂದ ಮಾಡಿಕೊಂಡು ಗ್ರಾಪಂ ಚುನಾವಣೆ ಗಾದಿ ಕಸಿಯುವ ಬಗ್ಗೆ ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿವೆೆ ಎಂಬ ಮಾತು ಕೇಳಿಬರುತ್ತಿದೆ.

ಅಭ್ಯರ್ಥಿಗಳು ಯಾರು? : ಮೊದಲ ಹಂತದಲ್ಲಿ (ಡಿ.22) ಹೊಸಕೋಟೆ ಹಾಗೂ ನೆಲಮಂಗಲ ಗ್ರಾಪಂ ಚುನಾವಣೆಗಳು ನಡೆಯಲಿದ್ದು, ಎರಡನೇ ಹಂತದಲ್ಲಿ (ಡಿ.27) ದೊಡ್ಡಬಳ್ಳಾಪುರ ಹಾಗೂ ನೆಲಮಂಗಲದಲ್ಲಿ ಚುನಾವಣೆ ನಡೆಯಲಿದೆ. ಇರುವ ಕಾಲಾವಧಿಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಮೂರೂ ಪಕ್ಷಗಳಿಗೆ ಸವಾಲಿನ ಕೆಲಸವಾಗಿದೆ. ಚುನಾವಣಾ ಕಣ ರಂಗೇರಿರುವ ನಡುವೆಯೇ ಕಣದಲ್ಲಿ ಯಾವ್ಯಾವ ಅಭ್ಯರ್ಥಿಗಳು ಸೆಣಸಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net