

ಶಿಡ್ಲಘಟ್ಟ: ತಾಲೂಕು ಆಡಳಿತದಿಂದ ಪಿಂಚಣಿ ಹಾಗೂ ಪೌತಿ ಖಾತೆ ಆಂದೋಲನ ಹಮ್ಮಿಕೊಂಡಿದ್ದು ಪ್ರತಿಯೊಬ್ಬರೂ ಇದರ ಅನುಕೂಲ ಪಡೆದುಕೊಳ್ಳಬೇಕೆಂದು ತಹಸೀಲ್ದಾರ್ ಕೆ.ಅರುಂಧತಿ ತಿಳಿಸಿದರು.
ತಾಲೂಕಿನ ಹೊಸಪೇಟೆ ಕಂದಾಯ ವೃತ್ತದಲ್ಲಿ ಮಂಗಳವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಪಿಂಚಣಿ ಹಾಗೂ ಪೌತಿ ಖಾತೆ ಆಂದೋಲನದಲ್ಲಿ ಮಾತನಾಡಿದರು.
ಪಿತ್ರಾರ್ಜಿತ ಜಮೀನನ್ನು ಮಕ್ಕಳ ಹೆಸರಿಗೆ ಖಾತೆ ಮಾಡಿಸುವ ಪ್ರಕ್ರಿಯೆ ಪೌತಿಖಾತೆ. ಪಿತ್ರಾರ್ಜಿತ ಜಮೀನು ಮಕ್ಕಳ ಹೆಸರಿಗೆ ವಿಭಜನೆಗೊಳ್ಳದೆ, ಇನ್ನೂ ಮೃತ ತಾತ, ತಂದೆ, ಪತಿ ಹೆಸರಲ್ಲೇ ಇದೆ. ಇದರಿಂದ ಸರ್ಕಾರದ ಯೋಜನೆಗಳು ಸಂಪೂರ್ಣ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಪೌತಿ ಖಾತೆ ಮಾಡಿಸಲು ಮುಂದಾಗಿದೆ ಎಂದರು.
ಪೌತಿ ಖಾತೆಗೆ 15 ಮತ್ತು ಪಿಂಚಣಿಗಾಗಿ 25 ಅರ್ಜಿಗಳು ಸಲ್ಲಿಕೆಯಾದವು. ಉಪತಹಸೀಲ್ದಾರ್ ಆನಂದಮೂರ್ತಿ, ರಾಜಸ್ವ ನಿರೀಕ್ಷಕ ಶಶಿಧರ್, ಸಿಬ್ಬಂದಿ ಮೋಹನ್‌ಕುಮಾರ್, ಕಾರ್ತಿಕ್, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಮತ್ತಿತರರು ಹಾಜರಿದ್ದರು.