ಹೊಸನಗರ ಟು ಕೊಲ್ಲೂರು ಪರ್ಯಾಯ ರಸ್ತೆಗೆ ಕೇಂದ್ರದಿಂದ ಶೀಘ್ರ 350 ಕೋಟಿ ಅನುದಾನ: ಬಿ.ವೈ.ರಾಘವೇಂದ್ರ

BDVT WEB
Published on

ಭದ್ರಾವತಿ: ಹೊಸನಗರದಿಂದ ಕೊಲ್ಲೂರುವರೆಗಿನ ಪರ್ಯಾಯ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಕೇಂದ್ರ ಸರ್ಕಾರ 350 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದೆ ಎಂಬ ಮಾಹಿತಿ ಇಂದು (ಮಂಗಳವಾರ) ಲಭ್ಯವಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ನಗರದಲ್ಲಿ ಮಂಗಳವಾರ ರೋಟರಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಈ ರಸ್ತೆಯಿಂದ 125 ತಿರುವುಗಳು, ಹಲವು ಗಂಟೆಗಳ ಪ್ರಯಾಣಕ್ಕೆ ಮುಕ್ತಿ ಸಿಗಲಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಕೇವಲ 20 ನಿಮಿಷದಲ್ಲಿ ಹೊಸನಗರದಿಂದ ಕೊಲ್ಲೂರು ತಲುಪಬಹುದು. ಇದು ಕೇಂದ್ರದಿಂದ ಜಿಲ್ಲೆಗೆ ದೊರೆತ ದೊಡ್ಡ ಯೋಜನೆ ಎಂದು ತಿಳಿಸಿದರು.

70 ಕೋಟಿ ರೂ. ಅನುದಾನ: ದೇವಸ್ಥಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಮುದಾಯ ಭವನಕ್ಕೆ ನಾನು ಅನುದಾನ ನೀಡಿರಬಹುದು. ಆದರೆ ಸಂಸದನಾಗಿ ಅನುದಾನ ನೀಡಲು ಶಕ್ತಿ ತುಂಬಿದ್ದು ನೀವು. ನಿಮ್ಮೆಲ್ಲರ ಸಹಕಾರದಿಂದಲೇ ನಿರ್ಮಾಣವಾಗಲು ಸಾಧ್ಯವಾಗಿದೆ.

ಭದ್ರಾವತಿ ಕ್ಷೇತ್ರದಲ್ಲಿ ಅವಶ್ಯವಿರುವ ಭವನಗಳ ನಿರ್ಮಾಣಕ್ಕಾಗಿ ಯಡಿಯೂರಪ್ಪ ಅವರ ಅಧಿಕಾರದ ಅವಧಿಯಲ್ಲಿ ಹಾಗೂ ಸಂಸದರ ನಿಧಿಯಿಂದ ಸುಮಾರು 70 ಕೋಟಿ ರೂ. ಅನುದಾನ ನೀಡಲಾಗಿದೆ. ಕೆಲವು ಉದ್ಘಾಟನೆಗೊಂಡಿವೆ, ಮತ್ತಷ್ಟು ಕಟ್ಟಡಗಳು ಮುಗಿಯುವ ಹಂತ ತಲುಪಿದೆ. 50 ಲಕ್ಷ ರೂ. ಅನುದಾನ ಹಾಗೂ ದಾನಿಗಳ ನೆರವಿನೊಂದಿಗೆ ರೋಟರಿ ಭವನವನ್ನು ಸ್ವಂತ ಮನೆಯಂತೆ ಸುಂದರವಾಗಿ ಕಟ್ಟಲಾಗಿದೆ. ಸರ್ಕಾರದ ಅನುದಾನದ ಹಣ ಸಾರ್ಥಕವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net