ಹೊಸನಗರ: ಕುಂಟಿಗೆ ಗ್ರಾಮದ ಪಾಳು ಬಿದ್ದ ಈಶ್ವರ ದೇವಸ್ಥಾನದಲ್ಲಿ ನಿಧಿಗೆ ಶೋಧ

NIDHI WEB
Published on

ಹೊಸನಗರ: ನಿಧಿಗಾಗಿ ದುಷ್ಕರ್ಮಿಗಳು ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಟಿಗೆ ಗ್ರಾಮದ ಪಾಳು ಬಿದ್ದ ಪುರಾತನ ಈಶ್ವರ ದೇವಸ್ಥಾನ ಆವರಣದಲ್ಲಿ ಅಗೆದು ಶೋಧ ಮಾಡಿದ್ದಾರೆ. ಆವರಣದ ಕಲ್ಲುಗಳನ್ನು ಕಿತ್ತು ಆಳವಾದ ಹೊಂಡ ಮಾಡಿದ್ದು, ವಾರದ ಹಿಂದೆ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಈಶ್ವರ ದೇವಸ್ಥಾನ ಸುಮಾರು 800 ವರ್ಷ ಹಳೆಯದಾಗಿದ್ದು, ಜೀರ್ಣೋದ್ಧಾರ ಮಾಡಿಲ್ಲ. ದೇವಸ್ಥಾನದ ದೇವರ ಪೀಠ ಮತ್ತಿತರ ಕಡೆ ಚಿನ್ನ, ಬೆಳ್ಳಿ ಹೂತಿರಬಹುದು ಎಂದು ನಿಧಿಗಳ್ಳರು ಅಲ್ಲಲ್ಲಿ ಅಗೆದಿದ್ದಾರೆ. ಕೆಲವೆಡೆಗಳಲ್ಲಿ 6 ಅಡಿವರೆಗೂ ಆಳ ಮಾಡಿದ್ದಾರೆ. ನಿರ್ಜನ ಪ್ರದೇಶವಾಗಿದ್ದರಿಂದ ಈ ಕೃತ್ಯ ಬೆಳಕಿಗೆ ಬಂದಿರಲಿಲ್ಲ.

ಗ್ರಾಮಸ್ಥರು ಹೊಸನಗರ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ.

ಮುಂದುವರೆದ ನಿಧಿಶೋಧ: ತಾಲೂಕಿನ ಐತಿಹಾಸಿಕ ಮತ್ತು ಪುರಾತನ ಕಾಲದ ಸ್ಥಳಗಳಲ್ಲಿ ನಿಧಿಗಳ್ಳರ ಅಕ್ರಮ ಚಟುವಟಿಕೆಗಳು ಮುಂದುವರೆದಿದೆ. ನಿಧಿ ಆಸೆಗೆ ಪುರಾತನ ಸ್ಥಳಗಳಲ್ಲಿ ಅಗೆಯುವುದು. ವಾಮಾಚಾರ ಮಾಡುವುದು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ಬಿದನೂರು ನಗರ ಸಮೀಪ ನಾಯಕರ ಸಮಾಧಿ ಸ್ಥಳ, ಲಿಂಗ ಇರುವ ಸ್ಥಳದಲ್ಲಿ ದುಷ್ಕರ್ಮಿಗಳು ಅಗೆದು ನಿಧಿಶೋಧ ಮಾಡಿದ್ದರು. ಈ ಘಟನೆ ಬೆನ್ನಲ್ಲೆ ಕುಂಟಿಗೆ ಪಾಳುಬಿದ್ದ ದೇವಸ್ಥಾನದಲ್ಲಿ ನಿಧಿಶೋಧ ನಡೆದಿರುವುದು ಅಚ್ಚರಿ ತರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net