ಹೊಸದುರ್ಗ ಕುಡಿವ ನೀರು ಪೂರೈಕೆ ಯೋಜನೆಗೆ ಶೀಘ್ರ ಚಾಲನೆ ಕೊಡಿ

ctd------1..
Published on

ಚಿತ್ರದುರ್ಗ:ಟ್ರಯಲ್ ರನ್ ಆಗಿರುವ ಹೊಸದುರ್ಗ ಮತ್ತಿತರ ಗ್ರಾಮಗಳಿಗೆ ಭದ್ರಾ ಬಲ ನಾಲೆಯಿಂದ ಕುಡಿವ ನೀರು ಪೂರೈಸುವ ಯೋಜನೆಯನ್ನು ಶೀಘ್ರ ಉದ್ಘಾಟಿಸುವಂತೆ ಸಂಸದ ಗೋವಿಂದ ಎಂ. ಕಾರಜೋಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನ್ನ, ನೀರಿನ ವಿಚಾರದಲ್ಲಿ ರಾಜಕಾರಣ ಸಲ್ಲದು, ಇದು ಹಿಂದುಸ್ತಾನ-ಪಾಕಿಸ್ತಾನ ಜಗಳವಲ್ಲವೆಂದು ಹೊಸದುರ್ಗಕ್ಕೆ ನೀರು ಪೂರೈಸುವುದನ್ನು ವಿರೋಧಿಸುತ್ತಿರುವ ದಾವಣಗೆರೆ ರೈತರು, ಪ್ರತಿನಿಧಿಗಳ ನಡೆ ವಿರುದ್ಧ ಹರಿಹಾಯ್ದರು.

ಮೂರು ಜಿಲ್ಲೆಗಳೂ ಸೇರಿ ಉತ್ತಮ ಕಾರ್ಯಕ್ರಮ ಏರ್ಪಡಿಸುವ ಮೂಲಕ ಯೋಜನೆಗೆ ಚಾಲನೆ ನೀಡಬೇಕಿದೆ. ಕುಡಿಯುವ ನೀರಿಗೆ ತೊಂದರೆ ಮಾಡಬಾರದೆಂದು ಸುಪ್ರೀಂಕೋರ್ಟ್ ಆದೇಶವಿದೆ. ಹೊಸದುರ್ಗ ತಾಲೂಕಿನ 346 ಜನವಸತಿ ಹಾಗೂ ತರೀಕೆರೆ ತಾಲೂಕಿನ 113 ಗ್ರಾಮಗಳಿಗೆ ಕುಡಿವ ನೀರು ಒದಗಿಸುವ ಯೋಜನೆ(ಎಂವಿಎಸ್)ಗೆ ನಮ್ಮ ಸರ್ಕಾರದ ಅವಧಿಯಲ್ಲಿ 800 ಕೋಟಿ ರೂ. ಮಂಜೂರು ಮಾಡಲಾಗಿತ್ತು ಎಂದು ತಿಳಿಸಿದರು.

ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಗೆ ಸಮಾಜವಾದ, ಜಾತ್ಯತೀತ ಪದಗಳನ್ನು ಸೇರಿಸಲಾಗಿದೆ ಎಂಬ ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್‌ನವರು ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಆರೋಪಿಸುತ್ತಿದ್ದಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜವಾದ, ಜಾತ್ಯತೀತ ಪದಗಳನ್ನು ತಿರಸ್ಕರಿಸಿದ್ದರು. ಆದರೆ, ಕಾಂಗ್ರೆಸ್ ತುರ್ತುಪರಿಸ್ಥಿತಿ ಅವಧಿಯಲ್ಲಿ ಅವುಗಳನ್ನು ಸೇರಿಸಿದೆ ಎಂದು ಹೊಸಬಾಳೆ ಅವರು ವಿಚಾರ ಪ್ರಸ್ತಾಪಿಸುವ ಮೂಲಕ ದೇಶದ ಜನರ ಮುಂದೆ ಚರ್ಚೆಗೆ ಇಟ್ಟಿದ್ದಾರೆ ಎಂದರು.

ಎರಡು ವರ್ಷಗಳ ಕಾಲ ಸಂವಿಧಾನ ಅಮಾನತ್ತಿನಲ್ಲಿಟ್ಟು, ದುರಾಡಳಿತ ನಡೆಸಲಾಗಿತ್ತು. ಸಂವಿಧಾನವನ್ನು ವಿಕಾರಗೊಳಿಸಿ, ಪ್ರತಿ ಪಕ್ಷಗಳ ಅನೇಕರನ್ನು ಜೈಲಿನಲ್ಲಿಟ್ಟಿದ್ದ ಕಾಂಗ್ರೆಸ್ ಯಾವತ್ತೂ ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಗೌರವಿಸಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಇದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ, ಕೇಂದ್ರದ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ, ಸಂಸದೆ ಪ್ರಿಯಾಂಕಾಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ದೇಶದ ಕ್ಷಮೆ ಕೇಳಬೇಕು ಎಂದರು.

ಎಂಎಲ್‌ಸಿ ಕೆ.ಎಸ್. ನವೀನ್, ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಎ. ಮುರುಳಿ, ಮಾಧುರಿ ಗಿರೀಶ್, ಸಂಪತ್‌ಕುಮಾರ್, ವೆಂಕಟೇಶ್‌ಯಾದವ್, ಎಚ್.ಎನ್. ಲೋಕೇಶ್, ನಾಗರಾಜ್, ಹೊಸದುರ್ಗ ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಆನಂದ, ಉಪಾಧ್ಯಕ್ಷೆ ಗಿರಿಜಾ, ರಘುಮೂರ್ತಿ, ಜಿ.ಪಂ. ಮಾಜಿ ಸದಸ್ಯ ಗುರುಸ್ವಾಮಿ ಇತರರು ಇದ್ದರು.

-------------

ರೇಣುಕಾಚಾರ್ಯ ಬಿಜೆಪಿಗೆ ಕಳಂಕ

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಿಜೆಪಿಗೆ ಕಳಂಕ ಎಂದು ಎಂಎಲ್‌ಸಿ ಕೆ.ಎಸ್. ನವೀನ್ ಕಿಡಿಕಾರಿದರು.

ಭದ್ರಾ ನಾಲೆಯಿಂದ ಹೊಸದುರ್ಗಕ್ಕೆ ನೀರು ಕೊಡುವ ಯೋಜನೆಗೆ ಬಿಜೆಪಿ ಸರ್ಕಾರ 800 ಕೋಟಿ ರೂ. ಹಾಗೂ ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ್‌ಯೋಜನೆಯಡಿ 31 ಕೋಟಿ ರೂ. ಮಂಜೂರು ಮಾಡಿದ್ದಾರೆ.

ನಮ್ಮದೇ ಯೋಜನೆ ವಿರೋಧಿಸುವ ರೇಣುಕಾಚಾರ್ಯ ಪಕ್ಷದಲ್ಲಿ ಇರಲು ಅರ್ಹರಲ್ಲ. ಅವರ ವಿರುದ್ಧ ದಾಖಲೆಗಳ ಸಹಿತ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪ್ರಧಾನಿಗೆ ದೂರು ಸಲ್ಲಿಸುವುದಾಗಿ ಹೇಳಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ಎಸ್‌ಸಿಗೆ ಮೀಸಲಾಗಿದೆ. ಯೋಜನೆಗೆ ಒಳಪಡುವ ಹೊಸದುರ್ಗ ತಾಲೂಕಿನ 346 ಗ್ರಾಮಗಳ ಪೈಕಿ 225ಕ್ಕೂ ಹೆಚ್ಚು ಗ್ರಾಮಗಳಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗದ ಜನರು ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಗ್ರಾಮಗಳ ಜನರಿಗೆ ಅನ್ಯಾಯವೆಸಗಲು ರೇಣಕಾಚಾರ್ಯ ಮುಂದಾಗಿದ್ದಾರೆ. ಅವರು ಬಿಜೆಪಿಗೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ ಎಂದರು.

ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್, ಶಾಸಕ ಬಿ.ಪಿ. ಹರೀಶ್‌ಗೆ ಹೆಸರು ಬರುತ್ತದೆಂಬ ಕಾರಣಕ್ಕೆ ದೊಡ್ಡ ನಾಯಕನ ರೀತಿ ರೇಣುಕಾಚಾರ್ಯ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಬಿಜೆಪಿ ಹಾಳು ಮಾಡಿರುವ ಅವರು ಚಿತ್ರದುರ್ಗ, ಚಿಕ್ಕಮಗಳೂರಲ್ಲಿ ಬಿಜೆಪಿಗೆ ಕೆಟ್ಟ ಹೆಸರು ತರಲಿದ್ದಾರೆ ಎಂದು ತಮ್ಮ ವಿರುದ್ಧ ವಾಗ್ದಾಳಿ ನಡೆಸಿರುವ ರೇಣುಕಾಚಾರ್ಯ ವಿರುದ್ಧ ನವೀನ್ ಹರಿಹಾಯ್ದರು.

---

ಕಪ್ಪಕ್ಕಾಗಿ ನಿತ್ಯ ಕಿರುಕುಳ

ಅಧಿಕಾರಕ್ಕಾಗಿ ಕಾಂಗ್ರೆಸ್ಸಿನ ಮೂರು ಗುಂಪುಗಳಲ್ಲಿ ನಡೆದಿರುವ ಆಂತರಿಕ ಕಚ್ಚಾಟದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಕಳೆದು ಹೋಗಿದ್ದಾರೆಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.

ಇದನ್ನು ನೋಡಿಯೇ ಈ ಸರ್ಕಾರ ಡಿಸೆಂಬರ್ ಅಂತ್ಯದೊಳಗೆ ಬೀಳಲಿದೆ ಎಂದು ಹೇಳಿದ್ದೇನೆ. ಈ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನಿಸದು. ಕಾಂಗ್ರೆಸ್ಸಿನ 42 ಶಾಸಕರು ಅನುದಾನ ಸಿಗುತ್ತಿಲ್ಲವೆಂದು ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದರಿಂದ ರಾಜ್ಯಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ ಅವರು ಶಾಸಕರ ಅಹವಾಲು ಕೇಳುತ್ತಿದ್ದಾರೆ ಎಂದರು.

ಸೋನಿಯಾಗಾಂಧಿ, ಪ್ರಿಯಾಂಕಗಾಂಧಿ ಹಾಗೂ ರಾಹುಲ್‌ಗಾಂಧಿ ಅವರು ಕಪ್ಪ ಕಾಣಿಕೆಗಾಗಿ ಕಾಂಗ್ರೆಸ್ ಸರ್ಕಾರಕ್ಕೆ ನಿತ್ಯ ಕಿರುಕುಳ ಕೊಡುತ್ತಿದ್ದಾರೆ. ಇದನ್ನು ತಡೆಯುವ ಶಕ್ತಿ ಎಐಸಿಸಿ ಅಧ್ಯಕ್ಷರಿಗೂ ಇಲ್ಲವಾಗಿದೆ. ಸಿದ್ದರಾಮಯ್ಯ ಅವರಿಗೆ ಆಡಳಿತದ ಮೇಲೆ ಮೊದಲಿದ್ದ ಹಿಡಿತ ಈಗಿಲ್ಲ ಎಂದರು.

-----------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net