ಹೊಸಕೋಟೆಯಲ್ಲೂ ಮೇಕ್‌ಶ್‌ಟಿ ಆಸ್ಪತ್ರೆ, ಸಚಿವ ಎಂಟಿಬಿ ನಾಗರಾಜ್ ಮಾಹಿತಿ, ಅನುಗೊಂಡನಹಳ್ಳಿ ಪಂಚಾಯಿತಿಯಲ್ಲಿ ವ್ಯಾಕ್ಸಿನ್ ಅಭಿಯಾನ

eb0e3698-f484-47f3-8ac3-c6fde37a82ad
Published on
ಬೆಂಗಳೂರು ಗ್ರಾಮಾಂತರ: ಹೊಸಕೋಟೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ಮೇಕ್‌ಶ್‌ಟಿ ಆಸ್ಪತ್ರೆಗೆ ಜು.7ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ಗುದ್ದಲಿಪೂಜೆ ನೆರವೇರಿಸಲಿದ್ದಾರೆ ಎಂದು ಪೌರಾಡಳಿತ ಮತ್ತು ಸಕ್ಕರೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ಅನುಗೊಂಡನಹಳ್ಳಿ ಹೋಬಳಿ ಗಣಗಲೂರು ಗ್ರಾಪಂ ವ್ಯಾಪ್ತಿಯ ಗಣಗಲೂರು, ಬಾಗೂರು, ಗುಂಡೂರು ಗ್ರಾಮಗಳಲ್ಲಿ ಭಾನುವಾರ ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮಾಂತರ ಜಿಲ್ಲೆಯಲ್ಲಿ ಕರೊನಾ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಈಗಾಗಲೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜು.7ರಂದು ತಾತ್ಕಾಲಿಕ ಆಸ್ಪತ್ರೆಯನ್ನು ಸಿಎಂ ಉದ್ಘಾಟಿಸಲಿದ್ದು, ಅದೇ ದಿನ ಹೊಸಕೋಟೆಯಲ್ಲೂ ಗುದ್ದಲಿಪೂಜೆ ನೆರವೇರಿಸಲಿದ್ದಾರೆ ಎಂದರು.
ಕರೊನಾ ಮೂರನೇ ಅಲೆ 2ರಿಂದ 12 ವರ್ಷ ವಯಸ್ಸಿನ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಕ್ಕಳ ಆರೋಗ್ಯ ರಕ್ಷಣೆಗೆ ಎಲ್ಲ ಬಗೆಯ ಮುಂಜಾಗ್ರತ ಕ್ರಮ ಕೈಗೊಳ್ಳುತ್ತಿದೆ ಎಂದರು.
ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ: ಕರೊನಾ ಎರಡನೇ ಅಲೆ ವೇಳೆ ವ್ಯಾಕ್ಸಿನ್ ಪಡೆದವರನ್ನು ಮೂರನೇ ಅಲೆ ಹೆಚ್ಚು ಬಾಧಿಸುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಕರೊನಾ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂದ 14 ದಿನಗಳಿಂದ ಪಂಚಾಯಿತಿವಾರು ಉಚಿತವಾಗಿ ಕರೊನಾ ಲಸಿಕಾ ಆಂದೋಲನ ನಡೆಸಿಕೊಂಡು ಬರಲಾಗುತ್ತಿದೆ. ಈಗಾಗಲೇ 6 ಪಂಚಾಯಿತಿಗಳಲ್ಲಿ ಕಾರ್ಯಕ್ರಮ ಯಶಸ್ಸಿಗೊಂಡಿದೆ. ಮುಂದಿನ ದಿನಗಳಲ್ಲೂ ಈ ಕಾರ್ಯಕ್ರಮ ಮುಂದುವರಿಯಲಿದೆ ಎಂದರು.
ಆನ್‌ಲಾಕ್ ಮೈಮರೆಯದಿರಿ: ಕರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳ ಚೇತರಿಕೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ಅನ್‌ಲಾಕ್‌ನ ಕೆಲವೊಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಾರ್ವಜನಿಕರು ಅನ್‌ಲಾಕ್ ವೇಳೆ ಕರೊನಾ ನಿಯಮ ಕಡೆಗಣಿಸಬಾರದು ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ ಸ್ಯಾನಿಟೈಸ್ ಮಾಡಿಕೊಳ್ಳುವುದನ್ನು ಮುಂದುವರಿಸಬೇಕು. ಇದರ ಜತೆಜತೆಗೆ ಆರ್ಥಿಕ ಚಟುವಟಿಕೆಗಳ ಕಡೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಅಭಿವೃದ್ಧಿಯತ್ತ ಕ್ಷೇತ್ರ: ನಿರೀಕ್ಷೆಯಂತೆ ಉಸ್ತುವಾರಿ ವಹಿಸಿಕೊಂಡ ಎಂಟಿಬಿ ನಾಗರಾಜ್ ಅವರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಚುರುಕುಪಡೆಯುತ್ತಿವೆ, ನೀರಾವರಿ ಯೋಜನೆಗಳಿಗೂ ವೇಗ ದೊರೆಯುತ್ತಿದೆ ಎಂದು ಜಿಪಂ ಮಾಜಿ ಸದಸ್ಯ ಚನ್ನಸಂದ್ರ ನಾಗರಾಜ್ ಹೇಳಿದರು.ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಉಸ್ತುವಾರಿ ಸಚಿವರು ಸರ್ಕಾರದಿಂದ ಹೆಚ್ಚಿನ ಅನುದಾನ ತರಲಿದ್ದು ಸಮಗ್ರ ಅಭಿವೃದ್ಧಿಗೆ ಕ್ಷೇತ್ರ ತೆರೆದುಕೊಳ್ಳುತ್ತಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net