ಹೊಸಕೋಟೆಯಲ್ಲಿ ವ್ಯಕ್ತಿ ವರ್ಚಸ್ಸಿನ ಕಾದಾಟ

Published on

ಎಂಟಿಬಿ ವರ್ಸಸ್ ಶರತ್ ನೇರ ೈಟ್ , ಬಿಜೆಪಿಗೆ ಪಕ್ಷ ಸೇರ್ಪಡೆ ಬಲ, ಕೈಗೆ ಸಾಂಪ್ರದಾಯಿಕ ಮತಗಳ ನೆರವು

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆ ನಾಲ್ಕೂ ತಾಲೂಕುಗಳ ಪೈಕಿ ಮೂರರಲ್ಲಿ ಪಕ್ಷದ ಹೆಸರಿನಲ್ಲಿ ಚುನಾವಣಾ ಸಮರ ನಡೆದರೆ ಹೊಸಕೋಟೆಯಲ್ಲಿ ವ್ಯಕ್ತಿ ವರ್ಚಸ್ಸಿನ ಆಧಾರದ ಮೇಲೆ ಚುನಾವಣಾ ಕದನ ನಿರ್ಣಯವಾಗುತ್ತದೆ. ಹೊಸಕೋಟೆ ಇತಿಹಾಸ ಅವಲೋಕಿಸಿದರೆ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ಆಧಾರಿತ ಮತದಾನ ನಡೆಯುವುದು ಕಂಡುಬಂದಿದೆ.
ಈ ಬಾರಿಯ ಹೊಸಕೋಟೆ ಚುನಾವಣಾ ಕದನದಲ್ಲೂ ರಾಜ್ಯದ ಪ್ರಭಾವಿ ಸಚಿವರಲ್ಲೊಬ್ಬರಾದ ಬಿಜೆಪಿಯ ಎಂಟಿಬಿ ನಾಗರಾಜ್ ಹಾಗೂ ಶಾಸಕ ಶರತ್‌ಬಚ್ಚೇಗೌಡ ನಡುವೆ ನೇರ ಕಾದಾಟ ನಡೆಯಲಿರುವುದು ನಿಚ್ಚಳವಾಗಿದೆ. ಎರಡೂ ಕಡೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೊಂದಿಗೆ ಅಬ್ಬರದ ಪ್ರಚಾರ ನಡೆಯುತ್ತಿದ್ದು ಮತದಾರರು ಸದ್ಯದ ಸನ್ನಿವೇಶದಲ್ಲಿ ಹಾಟ್‌ಸೀಟ್‌ನಲ್ಲಿ ಕುಳಿತಿದ್ದಾರೆ.
23 ಅಭ್ಯರ್ಥಿಗಳು: ಈ ಬಾರಿ ಜಿಲ್ಲೆಯ ಇನ್ನಿತರ ಮೂರು ಕ್ಷೇತ್ರಗಳಿಗೆ ಹೋಲಿಸಿದರೆ ಹೊಸಕೋಟೆ ಚುನಾವಣಾ ಕಣದಲ್ಲಿ ಬರೊಬ್ಬರಿ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದು ಪ್ರತಿ ಚುನಾವಣೆಯಲ್ಲೂ ಪುನಾವರ್ತನೆಯಾಗುತ್ತಿದೆ. ಭಾಗಶಃ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವುದೂ ಹೊಸದಲ್ಲ. ಎಂಟಿಬಿ ಬ್ರ್ಯಾಂಡ್ ಹಾಗೂ ಬಚ್ಚೇಗೌಡ ಹೆಸರಿನ ಮುಂದೆ ಇನ್ನಿತರ ಅಭ್ಯರ್ಥಿಗಳು ಸೆಣಸುವುದು ಕಷ್ಟಸಾಧ್ಯ ಎಂಬುದು ಹೊಸಕೋಟೆಯ ಇತಿಹಾಸ ಅರಿತ ಮತದಾರರ ಮನದಾಳದ ಮಾತಾಗಿದೆ.
ತಿಕ್ಕಾಟಗಳಿಗೆ ಕಾವು: ಕಳೆದ ಮರು ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಎಂಟಿಬಿ ನಾಗರಾಜ್ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಉದಯಕ್ಕೆ ಕಾರಣರಾದವರಲ್ಲಿ ಪ್ರಮುಖರೆನಿಸಿದ್ದರು. ಆದರೆ ಮರುಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಶರತ್‌ಬಚ್ಚೇಗೌಡ ಎದುರು ಸೋಲೊಪ್ಪಿಕೊಳ್ಳಬೇಕಾಯಿತು. ಆದರೂ ಎಂಎಲ್‌ಸಿಯಾಗಿ ಮಂತ್ರಿಗಿರಿ ಪಡೆದ ಎಂಟಿಬಿ ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ಮೂಲಕ ಕಾಲಿಗೆ ಚಕ್ರಕಟ್ಟಿಕೊಂಡಂತೆ ತಿರುಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಸೈ ಎನಿಸಿಕೊಂಡರು ಏತನ್ಮಧ್ಯೆ ಎಂಟಿಬಿ ಅಬ್ಬರದಲ್ಲಿ ಪಕ್ಷೇತರ ಅಭ್ಯರ್ಥಿ ತುಸು ಮಂಕಾದಂತೆ ಕಂಡುಬಂದಿದ್ದರು. ಇವರಿಬ್ಬರ ನಡುವೆ ಆಗಾಗ ತಿಕ್ಕಾಟಗಳು ನಡೆಯುತ್ತಲೇ ಬಂದಿದ್ದು, ಇದು ಚುನಾವಣೆ ಹೊಸ್ತಿಲಿನಲ್ಲಿ ಮತ್ತಷ್ಟು ಕಾವೇರಿದೆ.
ಬಿಜೆಪಿಗೆ ಪಕ್ಷ ಸಂಘಟನೆ ಬಲ: ಕಳೆದ ಮರುಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಗೊಂದಲಗೊಂಡಿದ್ದರು. ಇದರ ನಡುವೆ ಕೆಲವರು ತಟಸ್ಥರಾಗಿ ಉಳಿದುಹೋಗಿದ್ದರು. ಇದರಿಂದಲೇ ಮರುಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು ಎಂದು ಆಗಾಗ ಎಂಟಿಬಿ ನಾಗರಾಜ್ ಪುನರುಚ್ಚರಿಸುತ್ತಿದ್ದರು. ಪ್ರಸ್ತುತ ಸನ್ನಿವೇಶದಲ್ಲಿ ಇದೆಲ್ಲಕ್ಕೂ ಪರಿಹಾರ ಕಂಡುಕೊಂಡಿರುವ ಎಂಟಿಬಿ ಸಂಘಟನೆ ಜತೆಗೆ ಕಾಂಗ್ರೆಸ್‌ನಲ್ಲಿದ್ದ ಹಲವು ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಿಜೆಪಿಗೆ ಬರಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಟಸ್ಥರಾಗಿದ್ದ ಮುಖಂಡರು ಬಿಜೆಪಿ ಪಾಳೆಯ ಸೇರಿರುವುದು ಸಂಘಟನೆ ಬಲಗೊಂಡಿದೆ. ಕಾಂಗ್ರೆಸ್‌ಗೆ ಹೋಲಿಸಿದರೆ ಪಕ್ಷ ಸೇರ್ಪಡೆಯಲ್ಲಿ ಬಿಜೆಪಿ ಶರವೇಗದಲ್ಲಿದೆ. ಇದು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಪ್ರಮುಖ ಅಸವಾಗಲಿದ್ದು ಕಾಂಗ್ರೆಸ್ ಗೆಲುವಿನ ಓಟಕ್ಕೆ ಹ್ಯಾಂಡ್‌ಬ್ರೇಕ್ ಹಾಕಲಿದೆ ಎಂಬ ಮಾತು ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಇದು ನನ್ನ ಕಡೆಯ ಚುನಾವಣೆ ಕ್ಷೇತ್ರದ ಜನರ ಸೇವೆ ಮಾಡಲು ಇರುವ ಕೊನೆ ಅವಕಾಶ. ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಕನಸು ಕಂಡಿದ್ದೇನೆ ಇದನ್ನು ನನಸು ಮಾಡಲು ಇದು ಕೊನೆ ಅವಕಾಶ ಎಂದು ಎಂಟಿಬಿ ಪ್ರಚಾರದಲ್ಲಿ ತೊಡಗಿರುವುದು ಅನುಕಂಪದ ಅಲೆ ಸೃಷ್ಟಿಸಿದೆ.
ಕೈ ನಲ್ಲಿ ಭಿನ್ನಮತ ಬೂದಿಮುಚ್ಚಿದ ಕೆಂಡ: ಬಿಜೆಪಿಯಿಂದ ಸ್ಪರ್ಧಿಸಬೇಕಿದ್ದ ಶರತ್‌ಬಚ್ಚೇಗೌಡ ಮರುಚುನಾವಣೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದು ಕ್ಷೇತ್ರದಲ್ಲಿ ಮೂಲ-ವಲಸಿಗ ಎಂಬ ಬಣಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಶರತ್‌ಗೆ ಟಿಕೆಟ್ ನಿಕ್ಕಿಯಾಗುತ್ತದೆ ಎಂಬ ವಿಷಯ ಹರಿದಾಡುತ್ತಿದ್ದಾಗಲೇ ಸ್ಥಳೀಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟಗೊಂಡಿತ್ತು. ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲವೂ ತಿಳಿಯಾದಂತೆ ಕಂಡುಬಂದರೂ ಅಸಮಾಧಾನ ಬೂದಿಮುಚ್ಚಿದ ಕೆಂಡದಂತಿದೆ. ಇದು ಬಿಜೆಪಿ ಸಂಘಟನೆ ವಿರುದ್ಧ ಕಾಂಗ್ರೆಸ್‌ನ ಸಂಘಟಿತ ಹೋರಾಟಕ್ಕೆ ಪೆಟ್ಟುಬೀಳಲಿದೆ ಎಂಬ ಲೆಕ್ಕಾಚಾರ ಕಂಡುಬರುತ್ತಿದೆ. ಆದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣಾ ತಂತ್ರ ಹೆಣೆಯುತ್ತಿರುವ ಶರತ್‌ಬಚ್ಚೇಗೌಡ ಬಿಜೆಪಿಯನ್ನು ಸುಲಭವಾಗಿ ಗೆಲ್ಲಲು ಬಿಡುವುದಿಲ್ಲ ಎಂಬ ಮಾತುಗಳೂ ಹರಿದಾಡುತ್ತಿದೆ.

ಮತದಾರರ ವಿವರ
ಪುರುಷ ಮತದಾರರು 112349
ಮಹಿಳಾ ಮತದಾರರು 11321
ಇತರೆ 19

ಒಟ್ಟು 225586

ಲಿತಾಂಶ ವಿವರ 2018
ಎಂಟಿಬಿ ನಾಗರಾಜ್ ಕಾಂಗ್ರೆಸ್ 98824
ಶರತ್‌ಬಚ್ಚೇಗೌಡ ಬಿಜೆಪಿ 91227
ಕೃಷ್ಣಮೂರ್ತಿ ಜೆಡಿಎಸ್ 1083

ಗೆಲುವಿನ ಅಂತರ 7597

2019 ಮರು ಚುನಾವಣೆ
ಶರತ್ ಬಚ್ಚೇಗೌಡ ಸ್ವಾಭಿಮಾನಿ ಪಕ್ಷ 81671
ಎಂಟಿಬಿ ನಾಗರಾಜ್ ಬಿಜೆಪಿ 70185
ಪದ್ಮಾವತಿ ಕಾಂಗ್ರೆಸ್ 41443

ಗೆಲುವಿನ ಅಂತರ 11486

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net