ಹೊಸಕೋಟೆ ಸಹಕಾರ ಸಂಘದಲ್ಲಿ ಅವ್ಯವಹಾರ

OCT 28-HRP-01
Published on

ಹರಪನಹಳ್ಳಿ: ತಾಲೂಕಿನ ಹೊಸಕೋಟೆ ಸಹಕಾರ ಸಂಘದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಅಖಿಲ ಭಾರತ ಕಿಸಾನ್ ಸಭಾ ವತಿಯಿಂದ ಸಂಘದ ಕಚೇರಿ ಮುಂದೆ ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.

ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಹೊಸಕೋಟೆ ಗ್ರಾಮದ ಸಹಕಾರ ಸಂಘದಲ್ಲಿ ಕಳೆದ ಒಂಬತ್ತು ತಿಂಗಳ ರೈತರ ಪಿಗ್ಮಿ ಠೇವಣಿ ಮತ್ತು ಸಾಲಗಾರರ ಸಾಲದ ಮೊತ್ತ ಹಿಂದಿರುಗಿಸದೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ದೂರ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಪಿಗ್ಮಿ ಹಾಗೂ ಠೇವಣಿದಾರರ ಹಣ ಹಿಂದಿರುಗಿಸುವವರೆಗೆ ಹೋರಾಟ ನಡೆಸುವುದಾಗಿ ತಿಳಿಸಿದರು.

ರೈತ ಮುಖಂಡ ಬೊಮ್ಮಲಿಂಗಪ್ಪ ಮಾತನಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೈತರ ಹಣ ದುರುಪಯೋಗ ಮಾಡಿಕೊಂಡು ಸಾಕಷ್ಟು ಆಸ್ತಿ ಮಾಡಿದ್ದಾರೆ. ರೈತರು ಹಣ ಕೇಳಿದರೆ ನಾನು ಯಾವುದೇ ಹಣ ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ನಾನು ಅಧಿಕಾರಕ್ಕೆ ಬಂದು ಒಂಬತ್ತು ತಿಂಗಳಾಗಿದ್ದು, ಈ ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ಅವ್ಯವಹಾರವಾಗಿದೆ. ರೈತರ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net