ಹೊಸಕೋಟೆ ಕೆರೆಯಲ್ಲಿ ಹೊಸ ಅತಿಥಿ, ಕಾಡು ಬೆಕ್ಕು ಕಂಡ ಪ್ರಾಣಿಪ್ರಿಯರ ಹರ್ಷೋದ್ಗಾರ

23-Manjunath-HSK-01
Published on

ಮಂಜುನಾಥ ಎಸ್.ಸಿ. ಹೊಸಕೋಟೆ

ನಗರ ಸಮೀಪದ ದೊಡ್ಡಅಮಾನಿಕೆರೆ ಮಿನಿ ಪಕ್ಷಿಧಾಮ ಎಂದೇ ಪ್ರಖ್ಯಾತವಾಗಿದೆ. ಕಳೆದ ವರ್ಷ ಮೊಟ್ಟ ಮೊದಲ ಬಾರಿಗೆ ರಾಜಹಂಸಗಳು ತಂಡೋಪತಂಡವಾಗಿ ಬಂದಿದ್ದವು. ಇದರಿಂದ ಇಲ್ಲಿಯ ಪರಿಸರ ಪ್ರೇಮಿಗಳು ಹಾಗೂ ಪಕ್ಷಿಪ್ರಿಯರು ಸಂತಸಗೊಂಡಿದ್ದರು. ಈಗ ಕೆರೆ ಅಂಚಿನಲ್ಲಿ ಕಾಡು ಬೆಕ್ಕು ಕಾಣಿಸಿಕೊಂಡಿರುವುದು ಸಂತಸ ಇಮ್ಮಡಿಗೊಳಿಸಿದೆ.

ನೂರಾರು ವರ್ಷಗಳ ಇತಿಹಾಸವಿರುವ ಕೆರೆಯು ಸಾವಿರಾರು ಎಕರೆ ವಿಸ್ತೀರ್ಣ ಹೊಂದಿದೆ. ಮಾ.18ರ ಸಂಜೆ ಕೆರೆ ಅಂಗಳದಲ್ಲಿ ಕಾಡು ಬೆಕ್ಕು ಕಾಣಿಸಿಕೊಂಡಿತ್ತು. ಪಕ್ಷಿಪ್ರಿಯ ಡಾ.ಮಧುಚಂದ್ರ ಎಂಬುವವರು ಕ್ಯಾಮರಾದಲ್ಲಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆ ಜವಾಬ್ದಾರಿ ವಹಿಸಿದಲ್ಲಿ ಕೆರೆಯನ್ನು ಪಕ್ಷಿಧಾಮವಾಗಿ ಹಾಗೂ ಉತ್ತಮ ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪರಿಸರ ಪ್ರೇಮಿಗಳು ಹಲವು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದಾರೆ. ಆದರೂ ನಿರೀಕ್ಷಿತ ಲ ದೊರೆತಿಲ್ಲ.

ಕೆರೆ-ಕಟ್ಟೆಯ ಮೇಲೆ ಅತ್ಯುತ್ತಮವಾದ ಉದ್ಯಾನವನ ನಿರ್ಮಿಸಲು ಸ್ಥಳಾವಕಾಶ ಇದೆ. ವಾಯು ವಿಹಾರಕ್ಕೆ ಕೆರೆ ಕಟ್ಟೆಯಂಗಳ ಹೇಳಿ ಮಾಡಿಸಿದ ಜಾಗವಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತ ಹಾಗೂ ಶಾಸಕರು ಗಮನಹರಿಸಿದಲ್ಲಿ ಉತ್ತಮ ಪ್ರವಾಸಿತಾಣವನ್ನಾಗಿಸಬಹುದಾಗಿದೆ.

ಪಕ್ಷಿಗಳ ಕಲರವ: ಕೆಲ ವರ್ಷಗಳ ಹಿಂದೆ ಆವಲಹಳ್ಳಿ ಎಲೆ ಮಲ್ಲಪ್ಪನ ಕೆರೆಯಿಂದ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಿ ಕೆರೆಯಲ್ಲಿ ಸ್ವಲ್ಪಮಟ್ಟಿಗೆ ನೀರು ಉಳಿಯುವಂತೆ ಮಾಡಿ ಮೀನು ಸಾಕಣೆ ಮಾಡಲಾಗುತ್ತಿದೆ. ಇದರಿಂದ ಸುತ್ತಲ ಪರಿಸರ ತಕ್ಕಮಟ್ಟಿಗೆ ಕಳೆಗಟ್ಟಿದೆ. ಕಾಲಕ್ರಮೇಣ ಕೆಲ ಪಕ್ಷಿಗಳು ಈ ಭಾಗದಲ್ಲಿ ಗೂಡು ಕಟ್ಟಿ ವಾಸಿಸಲು ಶುರು ಮಾಡಿದ್ದು, ವಲಸೆ ಪಕ್ಷಿಗಳು ಸಂತಾನೋತ್ಪತ್ತಿಗೆ ಈ ಭಾಗವನ್ನು ಆಯ್ದುಕೊಳ್ಳುತ್ತಿವೆ. ಸದ್ಯ 200ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಇಲ್ಲಿ ಕಂಡುಬರುತ್ತಿವೆ. 2020ರಲ್ಲಿ ಮೊದಲ ಬಾರಿಗೆ ರಾಜಹಂಸ ಪಕ್ಷಿಗಳು ಠಿಕಾಣಿ ಹೂಡಿದ್ದವು. ಇದರಿಂದ ಈ ಭಾಗದಲ್ಲಿ ಪಕ್ಷಿ ಪ್ರಿಯರ ದಂಡೇ ಹಂಸಗಳನ್ನು ವೀಕ್ಷಿಸುತ್ತಿತ್ತು. ಈಗಲೂ ವಾರಾಂತ್ಯದಲ್ಲಿ ನೂರಾರು ಪಕ್ಷಿಪ್ರಿಯರು ಪಕ್ಷಿಗಳ ಪೋಟೊ ಕ್ಲಿಕ್ಕಿಸಲು ಬೆಳಗ್ಗೆ 6ರಿಂದಲೇ ಇಲ್ಲಿಗೆ ಬರುತ್ತಾರೆ.

ಕಸದ ಹಾವಳಿ ತಪ್ಪಿಸಿ: ಕೆರೆಯಂಗಳದಲ್ಲಿ ಕಟ್ಟಡದ ಅವಶೇಷ ಸುರಿಯಲಾಗುತ್ತಿದೆ. ಇದರ ಜತೆಗೆ ಅಕ್ಕ ಪಕ್ಕದ ಕಾರ್ಖಾನೆಗಳ ತ್ಯಾಜ್ಯವನ್ನು ರಾತ್ರೋರಾತ್ರಿ ಸುರಿದು ಪರಿಸರ ಹಾಳು ಮಾಡಲಾಗುತ್ತಿದೆ. ಕೆರೆಯಂಗಳ ಮದ್ಯಪ್ರಿಯರ ತಾಣವಾಗಿದೆ. ಮುಂಜಾನೆಯೂ ಕುಡುಕರ ಹಾವಳಿ ಹೆಚ್ಚುತ್ತಿದೆ. ಪಕ್ಷಿ ಛಾಯಾಗ್ರಾಹಕರಿಂದ ಕ್ಯಾಮರಾ ಕಸಿಯುವಿಕೆ, ಹಲ್ಲೆ ಪ್ರಕರಣ ಆಗಾಗ್ಗೆ ಸದ್ದು ಮಾಡುತ್ತವೆ. ಇದನ್ನು ನಿಯಂತ್ರಿಸಲು ಅಧಿಕಾರಿಗಳು ಪೊಲೀಸರು ಕ್ರಮ ವಹಿಸಬೇಕಿದೆ.

ಕಾಡು ಬೆಕ್ಕಿನಂಥ ಮಾಂಸಹಾರಿ ಪ್ರಾಣಿಗಳು ಈ ಪ್ರದೇಶದಲ್ಲಿವೆ ಎಂದರೆ ಅವುಗಳಿಗೆ ಸಾಕಷ್ಟು ಆಹಾರ ದೊರೆಯುತ್ತಿರುವುದರ ಸೂಚನೆ ಇದಾಗಿದೆ. ಜತೆಗೆ ಆ ಪ್ರಾಣಿಗಳ ವಾಸಕ್ಕೆ ಯೋಗ್ಯ ಪ್ರದೇಶ ಇದು ಎಂದು ಹೇಳಬಹುದಾಗಿದೆ. ಇಂಥ ಪ್ರದೇಶ ಅಭಿವೃದ್ಧಿಪಡಿಸುವುದರಿಂದ ಸಾಕಷ್ಟು ಅನುಕೂಲಗಳಾಗುತ್ತವೆ. ಸ್ವರೂಪ್ ಭಾರದ್ವಾಜ್, ಪರಿಸರ ಪ್ರೇಮಿ ಹೊಸಕೋಟೆ ನಗರಸಭೆಯಿಂದ ಯೋಜನಾ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದ್ದು, ಕೆರೆ ಅಭಿವೃದ್ಧಿಗೆ ಸುಮಾರು 17 ಲಕ್ಷ ಹಣ ಮೀಸಲಿಡಲಾಗಿದೆ. ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೆರೆ ಅಭಿವೃದ್ಧಿಗೆ ನಗರಸಭೆಯಿಂದಲೂ ಸಹಕಾರ ನೀಡಲಾಗುವುದು. ಅರುಣ್ ಕುಮಾರ್, ನಗರಸಭೆ ಅಧ್ಯಕ್ಷ, ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net