ಹೊಸಕೋಟೆ ಅಭಿವೃದ್ಧಿ ಬಿಜೆಪಿಗೆ ಸವಾಲು; ನಗರದ ಹೊಸ ಬಡಾವಣೆಗಳಲ್ಲಿಲ್ಲ ಮೂಲಸೌಲಭ್ಯ> ಕಸ ಸಮಸ್ಯೆಗೆ ಸಿಕ್ಕಿಲ್ಲ ಮುಕ್ತಿ

14-Manjunath-HSK-00001
Published on

ಮಂಜುನಾಥ ಎಸ್.ಸಿ.ಹೊಸಕೋಟೆ: ಹೊಸಕೋಟೆ ನಗರಸಭೆಯಲ್ಲಿ ಗೆಲುವಿನ ನಗೆ ಬೀರಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಸಾಲು ಸಮಸ್ಯೆಗಳು ಎದುರಾಗಿವೆ.

ಬೆಂಗಳೂರು ಸಮೀಪದ ತಾಲೂಕಾಗಿರುವುದರಿಂದ ವಲಸಿಗರು ಹೆಚ್ಚುತ್ತಿದ್ದು, ನೂತನ ಬಡಾವಣೆಗಳು ತಲೆ ಎತ್ತುತ್ತಿವೆ. ಮೂಲಸೌಕರ್ಯ ನೀಡಬೇಕಾದರೆ ಕೋಟಿ ಕೋಟಿ ಹಣ ಬಳಕೆಯಾಗಬೇಕಿದ್ದು, ಇಂದಿಗೂ ನಗರದ ಕರ್ನಾಟಕ ಬಡಾವಣೆ, ಅನ್ನಪೂರ್ಣೇಶ್ವರಿ ನಗರ, ನಿಸರ್ಗ ಬಡಾವಣೆ, ತ್ಯಾಗರಾಜ ಬಡಾವಣೆ, ಬಸವೇಶ್ವರ ಬಡಾವಣೆ ಹೀಗೆ ಹಲವು ಬಡಾವಣೆಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ.

ನಗರ ಪ್ರದೇಶದಲ್ಲಿ ನೀರಿನ ಸಮಸ್ಯೆ, ಕಸ ವಿಲೇವಾರಿ, ಬೀದಿ ನಾಯಿ ಹಾವಳಿ, ಬೀದಿದೀಪ, ಮೋರಿ ನಿರ್ವಹಣೆ, ಅಕ್ರಮ ಕಸಾಯಿಖಾನೆಗಳ ಉಪಟಳ, ನಗರಸಭೆಯ ವಾಣಿಜ್ಯ ಕಟ್ಟಡದ ಬಾಕಿ ಇರುವ ಬಾಡಿಗೆ ವಸೂಲಿ, ಉದ್ಯಾನವನಗಳ ಅಭಿವೃದ್ಧಿ ಹೀಗೆ ನಗರ ಹತ್ತು ಹಲವು ಸಮಸ್ಯೆಗಳ ಆಗರವಾಗಿದೆ.

ಈ ಎಲ್ಲ ಸಮಸ್ಯೆ ಬಗೆಹರಿಸಿ ಮೂಲಸೌಲಭ್ಯ ನೀಡಿ ಉತ್ತಮ ಆಡಳಿತ ನಡೆಸಬೇಕಿರುವ ಜವಾಬ್ದಾರಿ ನಗರಸಭೆ ಚುನಾವಣೆಯಲ್ಲಿ ಗೆದ್ದಿರುವ 31 ಸದಸ್ಯರ ಜವಾಬ್ದಾರಿಯಾಗಿದೆ.

ಬೀದಿ ನಾಯಿಗಳ ಸಮಸ್ಯೆ: ಐದಾರು ವರ್ಷಗಳಿಂದ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸಿಲ್ಲ. ಇದರಿಂದ ರಸ್ತೆಗಳಲ್ಲಿ ಸಾರ್ವಜನಿಕರು ನಿರಾತಂಕವಾಗಿ ಸಂಚರಿಸಲು ಕಷ್ಟಪಡುವಂತಾಗಿದೆ. ಹಲವರು ನಾಯಿ ದಾಳಿಗೆ ಒಳಗಾದರೆ, ವಾಹನ ಸವಾರರು ನಾಯಿಗಳ ದಾಳಿಯಿಂದ ಅಪಘಾತಕ್ಕೀಡಾಗಿದ್ದಾರೆ.

ಕಸದ ಸಮಸ್ಯೆ: ಕಸ ಸಂಗ್ರಹಕ್ಕೆ ನಗರಸಭೆ ಹಲವು ರೀತಿಯ ಯೋಜನೆ ಜಾರಿಗೆ ತಂದಿದ್ದು, ಬಹುತೇಕ ಪ್ರಯೋಗಗಳು ಸೂಕ್ತ ಲಿತಾಂಶ ನೀಡಿಲ್ಲ. ಹಸಿ ಕಸ ಹಾಗೂ ಒಣ ಕಸಗಳ ಪ್ರತ್ಯೇಕ ಸಂಗ್ರಹ, ಕಸ ವಿಲೇವಾರಿಗೆ ಘಟಕ ನಿರ್ಮಾಣ, ಹಸಿ ಕಸವನ್ನು ಕಾಂಪೋಸ್ಟ್ ಗೊಬ್ಬರವಾಗಿಸುವ ಘಟಕ ಆರಂಭ ಪ್ರಾಯೋಗಿಕವಾಗಿ ಶುರುವಾದರೂ ಸಫಲತೆ ಕಾಣದಿರುವುದು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ನಗರ ಹೊರವಲಯದ ರಸ್ತೆಗಳ ಅಕ್ಕಪಕ್ಕ ಕಸದ ರಾಶಿ, ರಾತ್ರೋರಾತ್ರಿ ಕೆರೆಯಂಗಳಕ್ಕೆ ಕಸ ಸುರಿಯುವುದು, ಕಸದ ರಾಶಿ ಹೆಚ್ಚಾದಲ್ಲಿ ಅದಕ್ಕೆ ಬೆಂಕಿ ಹಚ್ಚಿ ಸುಡುವುದು ಸಾಮಾನ್ಯವಾಗಿದೆ.

ಅವೈಜ್ಞಾನಿಕ ರಸ್ತೆ ಮೋರಿ ನಿರ್ಮಾಣ: ನಗರದ ಅಭಿವೃದ್ಧಿ ಹೆಸರಿನಲ್ಲಿ ರಸ್ತೆ, ಮೋರಿಗಳ ಅಭಿವೃದ್ಧಿ ನಡೆಯುತ್ತಿದ್ದು, ಅದರಲ್ಲಿ ಬಹುತೇಕ ಕಾಮಗಾರಿಗಳು ಅವೈಜ್ಞಾನಿಕ ಮತ್ತು ಕಳಪೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net