ಹೊಸ ಹುಡ್ಯದಲ್ಲಿ ಸಮಸ್ಯೆ ಆಲಿಸಿದ ಜಿಲ್ಲಾಡಳಿತ: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ

19CBP3
Published on

ಚಿಕ್ಕಬಳ್ಳಾಪುರ: ಜನರ ಮನೆ ಬಾಗಿಲಿಗೆ ತೆರಳಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಖುಷಿಯಲ್ಲಿ ಪೂರ್ಣಕುಂಭ ಮೇಳದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದ ಜನರು, ಆಹಾರ ಪದಾರ್ಥ ಸೇರಿ ವಿವಿಧ ಉತ್ಪನ್ನಗಳ ಪ್ರದರ್ಶನದಲ್ಲಿ ಭರ್ಜರಿ ವ್ಯಾಪಾರ, ಶಿಬಿರದಲ್ಲಿ ಜಿಲ್ಲಾಧಿಕಾರಿ ಸೇರಿ ಹಲವರ ಆರೋಗ್ಯ ತಪಾಸಣೆ, ಸವಲತ್ತುಗಳ ವಿತರಣೆ, ಗಮನ ಸೆಳೆದ ಜಾಗೃತಿ ಮಳಿಗೆಗಳು...

ಇವು ತಾಲೂಕಿನ ಹೊಸ ಹುಡ್ಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.

ಮೊದಲಿಗೆ ಜಿಲ್ಲಾಧಿಕಾರಿ ಆರ್.ಲತಾ ಗ್ರಾಮಸ್ಥರೊಂದಿಗೆ ಆಲಯದಲ್ಲಿ ಲಕ್ಷ್ಮೀ ಜನಾರ್ದನ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಗ್ರಾಮವಾಸ್ತವ್ಯಕ್ಕೆ ಚಾಲನೆ ನೀಡಿದರು. ಗ್ರಾಮದ ಪ್ರವೇಶ ದ್ವಾರದಲ್ಲಿ ಗ್ರಾಮದ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಆರತಿ ಬೆಳಗಿ ಸ್ವಾಗತಿಸಿದರು. ಗ್ರಾಮದಲ್ಲಿ ತಳಿರು ತೋರಣದ ಸಿಂಗಾರದಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಕೃಷಿ ವಸ್ತು ಪ್ರದರ್ಶನ, ತೋಟಗಾರಿಕೆ ಬೆಳೆಗಳ ವಸ್ತು ಪ್ರದರ್ಶನ, ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಪೌಷ್ಟಿಕ ಆಹಾರ ಸಪ್ತಾಹ ಶಿಬಿರ, ಬಾಲ್ಯ ವಿವಾಹ ತಡೆ ಕುರಿತ ಜಾಗೃತಿ ಕೇಂದ್ರ ಹಾಗೂ ರಾಷ್ಟ್ರೀಯ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿತ, ಪಾರ್ಶ್ವವಾಯು ಹಾಗೂ ಕ್ಯಾನ್ಸರ್ ರೋಗಗಳ ತಡೆಗಟ್ಟುವಿಕೆ ಕಾರ್ಯಕ್ರಮದಡಿ ಎನ್‌ಸಿಡಿ ಶಿಬಿರ ಕೈಗೊಳ್ಳಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಉಪ ವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್, ತಹಸೀಲ್ದಾರ್ ಗಣಪತಿ ಶಾಸ್ತ್ರಿ, ತಾಪಂ ಇಒ ಜಿ.ಆರ್.ಮಂಜುನಾಥ್, ಹೊಸಹುಡ್ಯ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಲಕ್ಷ್ಮೀನರಸಮ್ಮ ಮತ್ತಿತರರು ಇದ್ದರು.

ಅಭಿವೃದ್ಧಿ ಕೆಲಸಕ್ಕೆ ಚಾಲನೆ: ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಹೊಸಹುಡ್ಯ ಗ್ರಾಪಂ ವ್ಯಾಪ್ತಿಯ ತಮ್ಮನಾಯಕನಹಳ್ಳಿಯಲ್ಲಿ 10 ಲಕ್ಷ ರೂ.ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ಜಾತವಾರದಲ್ಲಿ ಗ್ರಾಮ ವಿಕಾಸ್ ಯೋಜನೆಯಲ್ಲಿ ತಲಾ 10 ಲಕ್ಷ ರೂಪಾಯಿಗಳ ಅನುದಾನದಲ್ಲಿ ನಿರ್ಮಾಣವಾಗಿರುವ ಗರಡಿ ಮನೆ ಹಾಗೂ ಸಮುದಾಯ ಭವನ ಉದ್ಘಾಟಿಸಲಾಯಿತು.

ಮಂಜೂರಾತಿ ಪತ್ರ ವಿತರಣೆ: ಗ್ರಾಮ ವಾಸ್ತವ್ಯದಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಆಯ್ಕೆಯಾದ 4,266 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು. ಬೀದಿದೀಪ, ಸ್ವಚ್ಛತೆ, ನೀರಿನ ವ್ಯವಸ್ಥೆ ಸೇರಿ ಮೂಲಸೌಕರ್ಯ ಕಲ್ಪಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಜನರು ಅಹವಾಲು ಸಲ್ಲಿಸಿದ್ದರು. ಇದಕ್ಕೆ ನಿಯಮಾನುಸಾರ ಇತ್ಯರ್ಥಕ್ಕೆ ಸೂಚಿಸಲಾಯಿತು.

ವಿದ್ಯಾರ್ಥಿಗಳೊಂದಿಗೆ ಸಂವಾದ: ಗಿಡ್ನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಿಕ್ಷಣವು ಉತ್ತಮ ಜೀವನ, ಸಮಾಜದಲ್ಲಿ ಘನತೆ ಹೆಚ್ಚಿಸಿಕೊಳ್ಳಲು ಸಹಕಾರಿ. ಇದಕ್ಕೆ ಶ್ರದ್ಧೆಯಿಂದ ಓದಿ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಬೇಕು. ಇಂಗ್ಲಿಷ್ ಮಾಧ್ಯಮ ಹೆಚ್ಚು ಎಂಬ ಭಾವನೆ ಬಿಡಬೇಕು. ಶ್ರದ್ಧೆ ಮತ್ತು ಆಸಕ್ತಿದಾಯಕ ಕಲಿಕೆ ಎಲ್ಲವನ್ನು ಸುಲಭ ಮಾಡಬಲ್ಲದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net