ಹೊಸ ಸರ್ಕಾರ: ಮೈಸೂರು ಜಿಲ್ಲೆಯ ಹಲವು ನಿರೀಕ್ಷೆಗಳು

palace
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷ ನೇತೃತ್ವದ ಸರ್ಕಾರ ರಚನೆಗೆ ಕ್ಷಣಗಣನೆ ಶುರುವಾಗಿದ್ದು, ನೂತನ ಸರ್ಕಾರದಿಂದ ಜಿಲ್ಲೆಗೆ ಹೆಚ್ಚಿನ ಲಾಭ ದೊರೆಯಲಿದೆಯೇ? ಹೊಸ ಯೋಜನೆಗಳು ಸಿಗಲಿವೆಯೇ ಎಂಬ ಹತ್ತಾರು ನಿರೀಕ್ಷೆಗಳು ರೆಕ್ಕೆ ಬಿಚ್ಚಿವೆ.

2013ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ರಚನೆಯಾಗಿದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಭರಪೂರ ಅನುದಾನ, ಅಭಿವೃದ್ಧಿ ಕಾರ್ಯದ ಲಾಭ ದೊರೆತಿತ್ತು. ನಗರದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಲಕ್ಷ್ಮೀಪುರನಲ್ಲಿ ಹೆರಿಗೆ ಆಸ್ಪತ್ರೆಯ ಉನ್ನತೀಕರಣ, ಪಡುವಾರಹಳ್ಳಿಯಲ್ಲಿ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿಗೆ ಬೃಹತ್ ಕಟ್ಟಡ, ಹೊಸ ಜಿಲ್ಲಾಧಿಕಾರಿ ಕಚೇರಿ, ಮಿನಿ ವಿಧಾನಸೌಧ ಸೇರಿದಂತೆ ಸಾಕಷ್ಟು ಶಾಶ್ವತ ಅಭಿವೃದ್ಧಿ ಕಾರ್ಯಗಳು ಆಗಿದ್ದವು.

ಅಂತೆಯೆ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರುತ್ತಿರುವುದರಿಂದ ಜಿಲ್ಲೆಯ ಚಿತ್ತ ಅತ್ತ ನೆಟ್ಟಿದೆ. ಆಸೆಗಣ್ಣಿನಿಂದ ಜನರು ಎದುರುನೋಡುತ್ತಿದ್ದಾರೆ. ಹೊಸ ಅಭಿವೃದ್ಧಿ ಕಾರ್ಯಕ್ರಮಗಳು, ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರುಜೀವ, ವಿವಿಧ ಬೇಡಿಕೆಗಳು ಸಹ ಈಡೇರಲಿವೆಯೇ ಎಂಬ ಆಶಾಭಾವ ಮೇಳೈಸಿದೆ.

ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬಿ:
ಪ್ರವಾಸೋದ್ಯಮವೇ ಮೈಸೂರಿನ ಜೀವಾಳ. ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸ್ಥಳೀಯವಾಗಿ ಲಭ್ಯ ಇರುವ ಸಂಪನ್ಮೂಲವನ್ನು ಬಳಸಿಕೊಂಡು ಮೈಸೂರು ಪ್ರವಾಸೋದ್ಯಮವನ್ನು ಪ್ರವಾಸಿ ಸ್ನೇಹಿಯಾಗಿ ರೂಪಿಸಬೇಕಿದೆ. ಅದಕ್ಕಾಗಿ ಅಲ್ಪಾವಧಿ, ದೀರ್ಘಾವಧಿ ಯೋಜನೆ ಹಾಕಿಕೊಂಡು ಕಾರ್ಯಗತಗೊಳಿಸಬೇಕಿದೆ ಎಂಬುದು ಪ್ರಮುಖ ಆಗ್ರಹವಾಗಿದೆ. ಜತೆಗೆ, ಕಾಡಂಚಿನ ಕಬಿನಿ ಹಿನ್ನೀರು ಪ್ರದೇಶದ ವನ್ಯಜೀವಿ, ಅರಣ್ಯ ಪ್ರವಾಸ ಅಭಿವೃದ್ಧಿ, ಚುಂಚನಕಟ್ಟೆ ಜಲಪಾತೋತ್ಸವಕ್ಕೆ ಇನ್ನಷ್ಟು ರಂಗು ತುಂಬಬೇಕು. ಪುಣ್ಯಕ್ಷೇತ್ರ ತಲಕಾಡು ಪ್ರದೇಶವನ್ನು ಯಾತ್ರಾಸ್ಥಳವಾಗಿ ಪರಿವರ್ತನೆ ಮಾಡಬೇಕಾಗಿದೆ.

ಮೈಸೂರಿನಲ್ಲಿ ಪ್ರವಾಸಿ ವೃತ್ತವನ್ನು ಸ್ಥಾಪನೆ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ನವಚೈನತ್ಯ ಕಲ್ಪಿಸಿಕೊಡಬೇಕು. ಇದರಿಂದ ಸುತ್ತಲಿನ ಜಿಲ್ಲೆಗಳ ಪ್ರವಾಸೋದ್ಯಮದ ಪ್ರಗತಿಗೂ ಅನುಕೂಲವಾಗಲಿದೆ. ಪ್ರತಿವರ್ಷ ಕೊನೇ ಕ್ಷಣದಲ್ಲಿ ತರಾತುರಿ ಸಿದ್ಧತೆ, ಅರೆಬರೆಯಾಗಿ ನಾಡಹಬ್ಬ ದಸರಾ ಮಹೋತ್ಸವ ಆಯೋಜಿಸಲಾಗಿದೆ. ಇದನ್ನು ತಪ್ಪಿಸಿ ಅಚ್ಚಕಟ್ಟಾಗಿ ದಸರಾ ನಡೆಯಲು ದಸರಾ ಪ್ರಾಧಿಕಾರ ರಚನೆ ಮಾಡಬೇಕಾಗಿದೆ.

ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಿ:
ಐತಿಹಾಸಿಕ ದೇವರಾಜ ಮಾರುಕಟ್ಟೆ ಕಟ್ಟಡ, ಲ್ಯಾನ್ಸ್‌ಡೌನ್ ಕಟ್ಟಡಗಳ ಸಂರಕ್ಷಣಾ ಕೆಲಸವನ್ನು ತುರ್ತಾಗಿ ಮಾಡಬೇಕಿದೆ. ಉಭಯ ಕಟ್ಟಡಗಳ ಜೀರ್ಣೋದ್ಧಾರದ ಕುರಿತು ಐದಾರು ವರ್ಷಗಳಿಂದ ಕೇಳಿಬರುತ್ತಿರುವ ಕೂಗಿಗೆ ಸರ್ಕಾರ ಈಗಲಾದರೂ ಕಿವಿಗೊಡಬೇಕಿದೆ. ಜತೆಗೆ, ನಗರದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಒತ್ತು ನೀಡಿ, 1 ಸಾವಿರ ಕೋಟಿ ರೂ. ನೀಡಬೇಕು ಎಂಬ ಬೇಡಿಕೆಗೂ ಸ್ಪಂದಿಸಬೇಕಾಗಿದೆ.

ವಿಶೇಷ ಅನುದಾನ ನೀಡಿ:
ವಿಜಯನಗರ ಮತ್ತು ದಟ್ಟಗಳ್ಳಿಯಲ್ಲಿ ಮುಡಾ ನಿರ್ಮಿಸಲು ಉದ್ದೇಶಿಸಿರುವ ಬಹುಮಹಡಿ ಗುಂಪು ವಸತಿ ಯೋಜನೆಗೆ ಒಪ್ಪಿಗೆ ನೀಡಬೇಕು. ಮೈಸೂರು ಹೊರಭಾಗದಲ್ಲಿ ಹೊರವರ್ತುಲ ರಸ್ತೆ ಟೌನ್ ಪ್ಲಾನಿಂಗ್ ಯೋಜನೆ (ಪೆರಿಫೆರಲ್ ರಿಂಗ್ ರಸ್ತೆ) ತ್ವರಿತವಾಗಿ ಕಾರ್ಯರೂಪಕ್ಕೆ ತರಬೇಕು. ಸ್ವಚ್ಛ ನಗರಿಗೆ ಕಪ್ಪುಚುಕ್ಕೆ ಆಗಿರುವ ವಿದ್ಯಾರಣ್ಯಪುರಂ ಸೂಯೇಜ್ ಫಾರ್ಮ್‌ನಲ್ಲಿ ಬೆಟ್ಟದಂತೆ ಬೆಳೆದುಕೊಂಡಿರುವ ಕಸದ ರಾಶಿಯನ್ನು ಕರಗಿಸಿ ಸ್ವಚ್ಛಗೊಳಿಸಬೇಕು. ನಗರದಲ್ಲಿ ನಿರಂತರವಾಗಿ ಸ್ವಚ್ಛತೆ ಕಾಪಾಡಿಕೊಳ್ಳಲು ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಿ ವ್ಯವಸ್ಥಿತ ಕಾರ್ಯಕ್ರಮ ರೂಪಿಸಬೇಕು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಘೋಷಣೆಯಾಗಿದ್ದ ಸಿನಿ ನಗರಿಯನ್ನು ಮೈಸೂರು ತಾಲೂಕಿನಲ್ಲಿ ನಿರ್ಮಿಸಲು ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು. ಇದರೊಂದಿಗೆ ಸಿನಿಮಾ ಉದ್ಯಮ, ಮೈಸೂರು ಪ್ರವಾಸೋದ್ಯಮಕ್ಕೆ ಅನುಕೂಲ ಕಲ್ಪಿಸಿಕೊಡಬೇಕಿದೆ.

ಕಿದ್ವಾಯಿ ಕಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪಿಸಿ:
ಎರಡು ವರ್ಷದ ಹಿಂದಿನ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಿದ್ವಾಯಿ ಸಂಸ್ಥೆಯ ಪ್ರಾದೇಶಿಕ ಕಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸಬೇಕು. ಇದಕ್ಕಾಗಿ ಅಗತ್ಯವಿರುವ ಭೂಮಿಯೊಂದಿಗೆ ಹಣಕಾಸಿನ ನೆರವು ಸಹ ಈಗಿನ ಸರ್ಕಾರ ನೀಡಬೇಕು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ನಿರ್ಮಾಣಕ್ಕೆ ಚಾಲನೆ ದೊರೆತಿದ್ದ ಡಾ.ಅಂಬೇಡ್ಕರ್ ಭವನ ಐದಾರು ವರ್ಷದಿಂದಲೂ ಅಪೂರ್ಣವಾಗಿದೆ. ಕಳೆದ ವರ್ಷ ಬಾಕಿ ಕೆಲಸಕ್ಕೆ 15 ಕೋಟಿ ರೂ. ಬಿಡುಗಡೆಯಾಗಿದೆ. ಕಟ್ಟಡ ಕೆಲಸವನ್ನು ಪೂರ್ಣಗೊಳಿಸಿ, ಜನರ ಬಳಕೆಗೆ ಅರ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಜನಸಾಮಾನ್ಯರಿಗೆ ತೊಂದರೆ ನಿವಾರಿಸಿ:
ಮೈಸೂರು ಸುತ್ತಲಿರುವ ಗ್ರಾಮ ಪಂಚಾಯಿತಿಗಳು ಉನ್ನತೀಕರಣಗೊಂಡಿರುವ ಪುರಸಭೆ, ಪಟ್ಟಣ ಪಂಚಾಯಿತಿ ಅತಂತ್ರವಾಗಿದೆ. ಆದಾಯ, ಅನುದಾನವಿಲ್ಲದೆ ಸೊರಗಿವೆ. ಈ ವ್ಯಾಪ್ತಿಯಲ್ಲಿ ಭೂ ವ್ಯವಹಾರಗಳು ಸ್ಥಗಿತಗೊಂಡು ಜನಸಾಮಾನ್ಯರಿಗೆ ತೊಂದರೆಯಾಗಿದ್ದು, ಇದನ್ನು ತ್ವರಿತಗತಿಯಲ್ಲಿ ಬಗೆಹರಿಸಬೇಕು ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.

ಬಿಜೆಪಿ ಸರ್ಕಾರದ ಘೋಷಣೆಗಳ ಕತೆ ಏನು?
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ 2022-23ನೇ ಸಾಲಿನ ಆಯವ್ಯಯದಲ್ಲಿ ಮೈಸೂರಿನಲ್ಲಿ ಪ್ರವಾಸಿ ವೃತ್ತ ಸ್ಥಾಪನೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸುಮಾರು 30 ಕೋಟಿ ರೂ.ಗಳಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರ, 250 ಕೋಟಿ ರೂ.ನಲ್ಲಿ 1,000 ವಿದ್ಯಾರ್ಥಿಗಳ ಸಾಮರ್ಥ್ಯದ ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿನಿಲಯ, ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್, ಅಗರಬತ್ತಿ ಕ್ಲಸ್ಟರ್ ಘೋಷಣೆಗಳ ಕಥೆ ಏನಾಗಲಿದೆ? 2023-24ನೇ ಸಾಲಿನ ಬಿಜೆಪಿ ಕೊನೆಯ ಬಜೆಟ್‌ನಲ್ಲಿ ನಗರದಲ್ಲಿ 10 ಕೋಟಿ ರೂ.ನಲ್ಲಿ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ ಸ್ಥಾಪನೆ ಕುರಿತು ಘೋಷಣೆ ಆಗಿದೆ. ಆದರೆ, ಇದರಲ್ಲಿ ಬಹುತೇಕ ಘೋಷಣೆಗಳು ಜಾರಿ ಆಗುವುದು ಅನುಮಾನ ಮೂಡಿಸಿದೆ. ಇದರ ಬದಲಿಗೆ ಹೊಸ ರೂಪದಲ್ಲಿ ಹೊಸ ಯೋಜನೆ ಪ್ರಕಟಿಸುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net