

ಧಾರವಾಡ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಸರ್ಕಾರಿ ಶಾಲೆಗಳ ಉಳಿವು ಹಾಗೂ ಬೆಳವಣಿಗೆ ಬಗ್ಗೆ ಗಮನ ಹರಿಸಿಲ್ಲ ಎಂದು ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ರಾಜ್ಯ ಮಟ್ಟದ ಸಂಘಟನಾ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸರ್ಕಾರಿ ಶಾಲೆಗಳು ಗಟ್ಟಿಯಾಗದೆ ದುರ್ಬಲ ಸ್ಥಿತಿಗೆ ಬರಲಿವೆ. ಇದಲ್ಲದೆ ಸರ್ಕಾರಿ ಶಾಲೆಗಳ ಮುಚ್ಚುವ ಸಂಖ್ಯೆ ಹೆಚ್ಚಲಿವೆ. ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡುವ ಬದಲು ಸರ್ಕಾರಿ ಶಾಲೆಗಳನ್ನು ಕೇಂದ್ರೀಯ ಶಾಲೆಗಳ ಮಾದರಿಯಲ್ಲಿ ಉನ್ನತೀಕರಣಗೊಳಿಸಲು ಆಲೋಚಿಸುವ ಅಗತ್ಯವಿದೆ. ಪ್ರತಿ ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ದೊರೆತರೆ ಸೃಜನಾತ್ಮಕತೆ ಬೆಳೆಯಲು ಸಾಧ್ಯ ಎಂದರು.
60-70 ದಶಕಗಳ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಕಲಿತವರಿಂದಲೇ ಇಂದು ಮೌಲ್ಯಗಳು ಉಳಿದಿವೆ. ಎಲ್ಲರನ್ನೂ ಒಗ್ಗೂಡಿಸುವುದೇ ಶಿಕ್ಷಣ. ಈ ನೀತಿಯನ್ನು ಜಾರಿಗೆ ತರುವ ಪೂರ್ವ ಎಸ್ಡಿಎಂಸಿ ಹಾಗೂ ಶಿಕ್ಷಕರೊಂದಿಗೆ ರ್ಚಚಿಸಿಲ್ಲ. ಈ ನೀತಿಯನ್ನು ಯಾರೂ ವಿರೋಧಿಸುತ್ತಿಲ್ಲ. ಸತ್ಯ, ನಿಷ್ಠುರತೆಯಿಂದ ಮಾತನಾಡುವವರು ಬೇಗ ದೇಶದ್ರೋಹಿಗಳಾಗುತ್ತಾರೆ ಎಂದರು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯು ಜನ ಸಾಮಾನ್ಯರ ಶಿಕ್ಷಣ ನೀತಿಗೆ ಪೂರಕವಾಗಿರಬೇಕು. ಬಡ ಮಕ್ಕಳಿಗೆ ಅನುಕೂಲವಾಗುವ ವ್ಯವಸ್ಥೆಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಹೊಸ ಶಿಕ್ಷಣ ನೀತಿಯಿಂದ ಸರ್ವರಿಗೂ ಗುಣಾತ್ಮಕ ಶಿಕ್ಷಣ ದೊರೆಯುವಂತಾಗಬೇಕು. ಶ್ರೇಣೀಕೃತ ಶಿಕ್ಷಣ ವ್ಯವಸ್ಥೆ ದೂರವಾಗಬೇಕು. ಸದ್ಯ ಕಾರ್ಯ ನಿರ್ವಹಿಸುತ್ತಿರುವ ಹಾಲಿ ಶಿಕ್ಷಕರ ಸೇವೆಗೆ ತೊಂದರೆ ಉಂಟಾಗಬಾರದು. ಉನ್ನತೀಕರಣಕ್ಕೆ ಹೆಚ್ಚು ಒತ್ತುಕೊಟ್ಟು, ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಗಮನ ಹರಿಸಬೇಕು ಎಂದರು.
ಸಮನ್ವಯ ವೇದಿಕೆ ಅಧ್ಯಕ್ಷ ಮೋಯುದ್ದೀನ್ ಕುಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಬೆಲವಂತರ ಗ್ರಾಪಂ ಮಾಜಿ ಸದಸ್ಯೆ ರತ್ನಾ ಕವಲಗೇರಿ, ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಇತರರು ಇದ್ದರು. ಈರಣ್ಣ ಮುರಗೋಡ ಸ್ವಾಗತಿಸಿದರು. ಶಿವರುದ್ರಗೌಡ ಪಾಟೀಲ ನಿರೂಪಿಸಿದರು. ಶಂಕರ ಬನಪ್ಪನವರ ವಂದಿಸಿದರು.